ಕೃತಯುಗದಲ್ಲಿ ನೀನು ದೇವಾಂಗನೆಂಬ
ಗಣೇಶ್ವರನಾಗಿ ಬಂದು ಆರಾಧಿಸುವಲ್ಲಿ,
ಸ್ಥೂಲಕಾಯನೆಂಬ ಜಂಗಮವಾಗಿ ಬಂದು
ಲಿಂಗಾರ್ಚನೆಯ ಮಾಡಿಹೋದ,
ಅದರ ಕ್ರಿಯಾಂಗವನು ಮರೆದೆಯಲ್ಲಾ ಬಸವಣ್ಣಾ.
ತ್ರೇತಾಯುಗದಲ್ಲಿ ನೀನು
ಘಂಟಾಕರ್ಣನೆಂಬ ಗಣೇಶ್ವರನಾಗಿ
ಬಂದು ಆರಾಧಿಸುವಲ್ಲಿ,
ಶೂನ್ಯಕಾಯನೆಂಬ ಜಂಗಮವಾಗಿ ಬಂದು
ಲಿಂಗಾರ್ಚನೆಯ ಮಾಡಿಹೋದ,
ಅದರ ಕ್ರಿಯಾಂಗವನು ಮರೆದೆಯಲ್ಲಾ ಬಸವಣ್ಣಾ.
ದ್ವಾಪರಯುಗದಲ್ಲಿ ನೀನು ವೃಷಭನೆಂಬ ಗಣೇಶ್ವರನಾಗಿ
ಬಂದು ಆರಾಧಿಸುವಲ್ಲಿ,
ಅನಿಮಿಷನೆಂಬ ಜಂಗಮನಾಗಿ ಬಂದು
ಲಿಂಗಾರ್ಚನೆಯ ಮಾಡಿಹೋದ,
ಅದರ ಕ್ರಿಯಾಂಗವ ಮರೆದೆಯಲ್ಲಾ ಬಸವಣ್ಣಾ.
ಕಲಿಯುಗದಲ್ಲಿ ನೀನು ಬಸವನೆಂಬ
ಗಣೇಶ್ವರನಾಗಿ ಬಂದು ಆರಾಧಿಸುವಲ್ಲಿ,
ಪ್ರಭುದೇವರೆಂಬ ಜಂಗಮವಾಗಿ ಲಿಂಗಾರ್ಚನೆಯ
ಮಾಡಬಂದ ಕಾಣಾ ಬಸವಣ್ಣಾ.
ಇಂತೀ ದೇವ ಭಕ್ತನೆಂಬ ನಾಮನಾಟಕ ಬಿನ್ನಾಣವಲ್ಲದೆ,
ಬೇರೆಂದು ಕಂಡವರಿಗೆ ನಾಯಕನರಕ ತಪ್ಪದು,
ಕೂಡಲಚೆನ್ನಸಂಗಮದೇವಾ.