Index   ವಚನ - 353    Search  
 
ಲಿಂಗಸ್ಥಲವ ಬಲ್ಲೆನೆಂಬ ಪರಬ್ರಹ್ಮಿಗಳು ನೀವು ಕೇಳಿರೆ, ಲಿಂಗಸ್ಥಲ ನಿಃಶೂನ್ಯವಾಯಿತ್ತು ಸಂಗಮದೇವರ ಬೆನ್ನಿನಲ್ಲಿ. ಜಂಗಮಸ್ಥವ ಬಲ್ಲೆನೆಂಬ ಪರಬ್ರಹ್ಮಿಗಳು ನೀವು ಕೇಳಿರೆ, ಜಂಗಮಸ್ಥಲ ನಿಃಶೂನ್ಯವಾಯಿತ್ತು ಪ್ರಭುದೇವರ ಬೆನ್ನಿನಲ್ಲಿ. ಭಕ್ತಿಸ್ಥಲವ ಬಲ್ಲೆನೆಂಬ ಪರಬ್ರಹ್ಮಿಗಳು ನೀವು ಕೇಳಿರೆ, ಭಕ್ತಿಸ್ಥಲ ನಿಃಶೂನ್ಯವಾಯಿತ್ತು ಸಂಗನಬಸವರಾಜದೇವರ ಬೆನ್ನಿನಲ್ಲಿ. [ಮಹೇಶ್ವರ ಸ್ಥಲವಬಲ್ಲನೆಂಬ ಪರಬ್ರಹ್ಮಿಗಳು ನೀವು ಕೇಳಿರೆ ಮಹೇಶ್ವರಸ್ಥಳ ನಿಃಶೂನ್ಯವಾಯಿತ್ತು ಮಡಿವಾಳ ಮಾಚಯ್ಯನ ಬೆನ್ನಿನಲ್ಲಿ] ಪ್ರಸಾದಿಸ್ಥಲವ ಬಲ್ಲೆನೆಂಬ ಪರಬ್ರಹ್ಮಿಗಳು ನೀವು ಕೇಳಿರೆ, ಪ್ರಸಾದಿಸ್ಥಲ ನಿಃಶೂನ್ಯವಾಯಿತ್ತು ಚಿಕ್ಕದಣ್ಣಾಯಕರ ಬೆನ್ನಿನಲ್ಲಿ. ಪ್ರಾಣಲಿಂಗಿ ಸ್ಥಲವ ಬಲ್ಲೆನೆಂಬ ಪರಬ್ರಹ್ಮಿಗಳು ನೀವು ಕೇಳಿರೆ, ಪ್ರಾಣಲಿಂಗಿಸ್ಥಲನಿಃಶೂನ್ಯವಾಯಿತ್ತು ಸಿದ್ದರಾಮೇಶ್ವರ ದೇವರ ಬೆನ್ನಿನಲ್ಲಿ. ಶರಣ ಸ್ಥಲವ ಬಲ್ಲೆನೆಂಬ ಪರಬ್ರಹ್ಮಿಗಳು ನೀವು ಕೇಳಿರೆ, ಶರಣಸ್ಥಲ ನಿಃಶೂನ್ಯವಾಯಿತ್ತು ಘಟ್ಟಿವಾಳಯ್ಯನ ಬೆನ್ನಿನಲ್ಲಿ] ಐಕ್ಯಸ್ಥಲವ ಬಲ್ಲೆನೆಂಬ ಪರಬ್ರಹ್ಮಿಗಳು ನೀವು ಕೇಳಿರೆ, ಐಕ್ಯಸ್ಥಲ ನಿಃಶೂನ್ಯವಾಯಿತ್ತುಅಜಗಣ್ಣದೇವರ ಬೆನ್ನಿನಲ್ಲಿ ಇಂತೆನ್ನ ಷಟ್‍ಸ್ಥಲಂಗಳು ಒಬ್ಬೊಬ್ಬರ ಬೆನ್ನಿನಲ್ಲಿ ನಿಃಶೂನ್ಯವಾದವು ಎನಗಿನ್ನಾವ ಕಿಂಚಿತು ಸ್ಥಲವೂ ಇಲ್ಲವಯ್ಯಾ ಚೆನ್ನಮಲ್ಲಿಕಾರ್ಜುನಯ್ಯಾ.