ವಚನ - 354     
 
ಲಿಂಗಾಂಗಸಂಗ ಸಮರಸ ಸುಖದಲ್ಲಿ ಮನವೇದ್ಯವಾಯಿತ್ತು. ನಿಮ್ಮ ಶರಣರ ಅನುಭಾವ ಸಂಗದಿಂದ, ಎನ್ನ ತನು ಮನ ಪ್ರಾಣ ಪದಾರ್ಥವ, ಗುರುಲಿಂಗ ಜಂಗಮಕ್ಕಿತ್ತು. ಶುದ್ಧಸಿದ್ಧಪ್ರಸಿದ್ಧ ಪ್ರಸಾದಿಯಾದೆನು. ಆ ಮಹಾಪ್ರಸಾದದ ರೂಪು ರುಚಿ ತೃಪ್ತಿಯ ಇಷ್ಟ ಪ್ರಾಣ ಭಾವಲಿಂಗದಲ್ಲಿ ಸಾವಧಾನದಿಂದರ್ಪಿಸಿ ಮಹಾಘನಪ್ರಸಾದಿಯಾದೆನು. ಇಂತೀ ಸರ್ವಾಚಾರ ಸಂಪತ್ತು ಎನ್ನ ತನುಮನ ವೇದ್ಯವಾಯಿತ್ತು. ಲಿಂಗಸಂಗಸುಖದಲ್ಲಿ ಮನವೇದ್ಯವಾಯಿತ್ತು. ಇನ್ನೆಲ್ಲಿಯಯ್ಯಾ, ಎನಗೆ ನಿಮ್ಮಲ್ಲಿ ನಿರವಯವು? ಇನ್ನೆಲ್ಲಿಯಯ್ಯಾ ನಿಮ್ಮಲ್ಲಿ ಕೂಡುವುದು? ಪರಮಸುಖದ ಪರಿಣಾಮ ಮನ ಮೇರೆದಪ್ಪಿ ನಾನು ನಿಜವನೈದುವ ಠಾವ ಹೇಳಾ ಚೆನ್ನಮಲ್ಲಿಕಾರ್ಜುನ ಪ್ರಭುವೆ?