ವಚನ - 364     
 
ವಿರಕ್ತಿ ವಿರಕ್ತಿ ಎಂಬರು ವಿರಕ್ತಿಯ ಪರಿ ಎಂತುಟು ಹೇಳಿರಯ್ಯಾ. ಕಟ್ಟಿದ ಲಿಂಗವ ಕೈಯಲ್ಲಿ ಹಿಡಿದಿದ್ದರೆ ವಿರಕ್ತನೆ? ಹುಟ್ಟು ಕೆತ್ತುವ ಡೊಂಬನಂತೆ ಬಿಟ್ಟಮಂಡೆಯ ಕೇಶವ ನುಣ್ಣಿಸಿ ಬಣ್ಣಿಸಿ, ಎಣ್ಣೆಯ ಗಂಟ ಹಾಕಿದಡೆ ವಿರಕ್ತನೆ? ಕಟ್ಟುಹರಿದ ಪಂಜಿನಂತೆ, ಬಿಟ್ಟಮಂಡೆಯ ಕಟ್ಟದಿರ್ದಡೆ ವಿರಕ್ತನೆ? ಹರದನಂತೆ ಹೇಸಿಯಾಗಿರ್ದಡೆ ವಿರಕ್ತನೆ? ಮೂಗನಂತೆ ಮಾತನಾಡದಿರ್ದಡೆ ವಿರಕ್ತನೆ? ಹೊನ್ನು ಹೆಣ್ಣು ಮಣ್ಣ ಬಿಟ್ಟು ಅಡವಿಯಾರಣ್ಯದಲ್ಲಿರ್ದಡೆ ವಿರಕ್ತನೆ? ಅಲ್ಲ. ವಿರಕ್ತನ ಪರಿಯೆಂತೆಂದೊಡೆ ,ಒಡಲ ಹುಡಿಗುಟ್ಟಿ, ಮೃಡನೊಳೆಡದೆರಹಿಲ್ಲದಿರಬಲ್ಲಡೆ ವಿರಕ್ತನಪ್ಪನು. ಅಲ್ಲದಿರ್ದಡೆ ಮೈಲಾರಿ ಮಲ್ಲಿ ಗೊರವಿಯಲ್ಲವೆ ಚೆನ್ನಮಲ್ಲಿಕಾರ್ಜುನಾ?