Index   ವಚನ - 1382    Search  
 
ಪಾದಪೂಜೆಯ ಮಾಡಿ, ಅಂಗುಷ್ಠವೆರಡು ಅಂಗುಲವೆಂಟು ಉಭಯಹಸ್ತದಲ್ಲಿ ಮಾಡಿಕೊಂಬುದೆ ಶಿಕ್ಷಾಪಾದೋದಕ. "ಲಿಂಗಧಾರೀ ಮಹಾಯೋಗೀ ಚರಪಾದೋದಕಂ ವಿನಾ| ದಿನೇನ ದಶಜನ್ಮಾನಿ ಮಾಸೇನ ಶತಜನ್ಮಸು|| ವರ್ಷೇ ಸಹಸ್ರಜನ್ಮಾನಿ ವರ್ಷಾರ್ಧೇ ಘೂಕವಾಯಸೌ| ದ್ವಿವರ್ಷೇ ಸೌಕರೇ ಗರ್ಭೇ ಜಾಯತೇ ನಾತ್ರ ಸಂಶಯಃ"|| ಎಂದುದಾಗಿ ಆ ಶಿಕ್ಷಾಪಾದೋದಕವನೆ ಆ ವಿಭೂತಿಯಲ್ಲಿ ಸಮ್ಮಿಶ್ರವ ಮಾಡಿ ಲಲಾಟ ಮೊದಲಾದ ನಾಲ್ವತ್ತೆಂಟು ಸ್ಥಾನಂಗಳಲ್ಲಿ ಧಾರಣವ ಮಾಡುವುದು ಇದು ವೀರಶೈವರಿಗೆ ಸಲ್ಲುವ ನಡತೆ. ಶುದ್ಧಶೈವರಿಗೆ ಗಿಂಡಿಯಲ್ಲಿ ತುಂಬುವ ನಡತೆ. ವಿಶೇಷವೀರಶೈವರು ಗಿಂಡಿಯ ಮಾಡಲಾಗದು, ಅದೇನು ಕಾರಣವೆಂದಡೆ: ಅವರಿಗೆ ತ್ರಿವಿಧ ಪಾದೋದಕವು ನಿತ್ಯದ ಸಹಬಂಧವಾಗುವುದೆಂದು. [ಇದ]ನರಿದು ಆಚರಿಸುವಾತನೆ ನಿತ್ಯಮುಕ್ತನಯ್ಯಾ ಕೂಡಲಚೆನ್ನಸಂಗಮದೇವಾ.