Index   ವಚನ - 1449    Search  
 
ಭಕ್ತನಾಗಿ ಬಯಕೆಯ ಮಾಡಿ ನೋಡುವದು ಭಕ್ತಿಯ ಸ್ಥಲವಲ್ಲ. ಬಯಸಿ ಮಾಡುವುದೆ ಭಕ್ತಿಯ ಕೇಡು. ಕೂಡಿಸಿ ಮಾಡುವುದೆ [ಕೂಡಿದ ಕೇಡು] [ಸಾಯಸ]ವಿಲ್ಲದೆ ಸಮತೆಯ ಮಾಡಿ, ಬೋನವ ನೀಡಿಹೆನೆಂಬುದು ಸಜ್ಜನತ್ವದ ಕೇಡು. ಇಂಥ ಬಯಕೆಯ ಮಾಡಿ ನೀಡುವವನ ಭಕ್ತಿ ಬರಿಯ ಮಡಕೆಯನಟ್ಟು ಹೊರಗೆ ಹುಲಿಯೇದಿಸಿದಂತಾಯಿತ್ತು? ಕಾಣಾ. ಅವನು ಭಕ್ತಿ ಜಪತಪ ನೇಮನಿತ್ಯ ಅನುಷ್ಠಾನಾರ್ಚನೆ ಷೋಡಶ ಉಪಚಾರವ ಮಾಡಿ ಮುಕ್ತಿಯ ಪಡೆದೆನೆಂದು ಗುರುವಿನಲ್ಲಿ ಆಜ್ಞೆಯ ಮಾಡಿಕೊಂಡು, ಸಮಯಾಚಾರಕ್ಕೆ ಜಂಗಮದೇವರ ತಂದು, ಪ್ರಸಾದ ಕೃತ್ಯವೆಂದು ಕಟ್ಟು ಮಾಡಿ ತನ್ನಲ್ಲಿ ಇಟ್ಟುಕೊಂಡು ಆಯತದ ಅಗ್ಘವಣಿ ಆಯತವೆಂದು ಮಾಡುವನ್ನಕ್ಕ [ಶೀಲವೆ?] ಆ ಜಂಗಮದೇವರ ತಂದು ತನ್ನ ಮನೆಯಲ್ಲಿಟ್ಟುಕೊಂಡು, ಆ ಜಂಗಮಕ್ಕೆ ಇಚ್ಛಾಭೋಜನವ ನೀಡಿ ತೃಪ್ತಿಯಂ ಬಡಿಸಿ, ಮುಂದೆ ಕೃತ್ಯವ ಮಾಡುವುದೇ ಸತ್ಯ ಸದಾಚಾರ ಶೀಲ, ಧರ್ಮದ ನಡೆ ಧರ್ಮದ ನುಡಿ. ಇದು ತಪ್ಪದೇ ಒಪ್ಪುದು ಕಾಣಾ. ಇದರ ಅಂತುವನರಿಯದೆ, ತನ್ನ ಮನೆಯ ಆಯತದ ಬೋನವಾಗುವನ್ನಕ್ಕ ಆ ಜಂಗಮದೇವರ ಹಸಿದು ಬಳಲಿಸು ಎಂದು ಆಯತವ ಕಟ್ಟಿಕೊಟ್ಟನೆ ನಿಮ್ಮ ಗುರುನಾಥನು? ಇಂಥ ಕಟ್ಟಳೆಯ ಕಟ್ಟಿದಾತ ಗುರುವಲ್ಲ, ಕಟ್ಟಿಕೊಂಡಾತ ಭಕ್ತನಲ್ಲ, ಭವಿ. ಇಂತೀ ಗುರುವಲ್ಲ ನರನು, ಇಂತಿವರು ಭಕ್ತರಲ್ಲ. ಒಲಿದು ಭಕ್ತಿಯ ಮಾಡಿಹನೆಂದು ಭಕ್ತನ ಅಂತವನರಿಯದೆ ಮುಂದುಗಾಣದೆ ಕೃತ್ಯವ ಕಟ್ಟುವ ಗುರುವಿಗೆ ಮುಂದೆಬಹ ನರಕ ಇವರಿಗೆ ಇಂದೇ ಅಘೋರನರಕ ಕಾಣಾ ಮಹಾದಾನಿ ಕೂಡಲಚೆನ್ನಸಂಗಮದೇವಯ್ಯಾ.