Index   ವಚನ - 1499    Search  
 
ಮನು ಮುನೀಶ್ವರ ವೇದ ಶಾಸ್ತ್ರ ಸ್ಮೃತಿಗಳೆಲ್ಲ ತಮ ತಮಗೆ ಹೊಗಳುತಿಹವು ಶಿವಘನತೆಯಂ. ಘನತರಾಂತರಗಾಣದ ಅತ್ಯತಿಷ್ಠದ್ದಶಾಂಗುಲನೆಂದು, ಒರಲುತಿಹವು ಎನಲು, ಆ ಘನವದು ದರ್ಶನಾಗಮ ತರ್ಕದನುಮತಕೆ ಸಾಧ್ಯವೆ? ಲಿಂಗದ ಮಹಾತ್ಮೆಗೆ ಕಡೆಯನೆಣಿಸಲಿಲ್ಲಾಗಿ. ಪ್ರಣವಾದಿ ಪಂಚಾಕ್ಷರಿಯೊಳಗಡಕವಾಗಿಹುದು ಸತ್ಯ, ನಿತ್ಯ. ಅನಿತ್ಯದೇವತೆಗಳರಿಯಲಿಕಳವೆ ಸಚ್ಚಿದಾನಂದ ಶಿವಜ್ಞಾನಾನುಭಾವಭಾವೋತ್ತಮರ ಭಾವ ಕರಣದ ಕರದೊಳಮೃತಕರಕಿರಣ ಸಮ್ಯಗ್ಜೋತಿಯ ಒತ್ತರಿಸಿ ತೊಳತೊಳಗುವತ್ಯಂತ ನಿರವಯದ ಮತ್ತೆ ಸಚ್ಚಿತ್ ಸುಖನಿರಂಜನದ ನಿರ್ಮಲದ ನಿತ್ಯ ಕೂಡಲಚೆನ್ನಸಂಗನನು ಪ್ರಭುಲಿಂಗದಲ್ಲಿಯೆ ಕಂಡೆನು.