ವಚನ - 389     
 
ಸದ್ಗುರು ಸ್ವಾಮಿ ಶಿಷ್ಯಂಗೆ ಅನುಗ್ರಹವ ಮಾಡುವಲ್ಲಿ ತಚ್ಫಿಷ್ಯನ ಮಸ್ತಕದ ಮೇಲೆ ತನ್ನ ಹಸ್ತವನಿರಿಸಿದಡೆ ಲೋಹದ ಮೇಲೆ ಪರುಷ ಬಿದ್ದಂತಾಯಿತ್ತಯ್ಯಾ. ಒಪ್ಪುವ ಶ್ರೀ ವಿಭೂತಿಯ ನೊಸಲಿಂಗೆ ಪಟ್ಟವಕಟ್ಟಿದಡೆ ಮುಕ್ತಿರಾಜ್ಯದ ಒಡೆತನಕ್ಕೆ ಪಟ್ಟವಕಟ್ಟಿದಂತಾಯಿತ್ತಯ್ಯಾ. ಸದ್ಯೋಜಾತ ವಾಮದೇವ ಅಘೋರ ತತ್ಪುರುಷ ಈಶಾನವೆಂಬ ಪಂಚಕಳಶದಭಿಷೇಕವ ಮಾಡಿಸಲು, ಶಿವನ ಕರುಣಾಮೃತದ ಸೋನೆ ಸುರಿದಂತಾಯಿತ್ತಯ್ಯಾ. ನೆರೆದ ಶಿವಗಣಂಗಳ ಮಧ್ಯದಲ್ಲಿ ಮಹಾಲಿಂಗವನು ಕರತಳಾಮಳಕವಾಗಿ ಶಿಷ್ಯನ ಕರಸ್ಥಲಕ್ಕೆ ಇತ್ತು, ಅಂಗದಲ್ಲಿ ಪ್ರತಿಷ್ಠಿಸಿ, ಪ್ರಣವಪಂಚಾಕ್ಷರಿಯುಪದೇಶವ ಕರ್ಣದಲ್ಲಿ ಹೇಳಿ, ಕಂಕಣವ ಕಟ್ಟಿದಲ್ಲಿ, ಕಾಯವೆ ಕೈಲಾಸವಾಯಿತ್ತು; ಪ್ರಾಣವೆ ಪಂಚಬ್ರಹ್ಮಮಯ ಲಿಂಗವಾಯಿತ್ತು. ಇಂತು ಮುಂದ ತೋರಿ ಹಿಂದ ಬಿಡಿಸಿದ ಶ್ರೀಗುರುವಿನ ಸಾನ್ನಿಧ್ಯದಿಂದಾನು ಬದುಕಿದೆನಯ್ಯಾ ಚೆನ್ನಮಲ್ಲಿಕಾರ್ಜುನಾ.