Index   ವಚನ - 1607    Search  
 
ವಿಷಯಾಭಿಲಾಷೆಯಲ್ಲಿ ವಿರಾಗವು ನೆಲೆಯಾಗಿ, ಅಷ್ಟಾವರಣದ ಆಚಾರವೆ ಅಂಗವಾದಡೆ; ಮರುಳುಗೊಳಿಪ ಮಾರನ ಮಾಟವು ದೂರವಾಗುವುದಯ್ಯಾ. ಅನಾಹತಶಬ್ದದ ಅನುಸಂಧಾನದಿಂದ, ಅವಸ್ಥಾತ್ರಯದಲ್ಲಿ ತೋರುವ ತನು ಮೂರರ ವಾಸನೆಯು ನಾಶವಾಗುವುದಯ್ಯಾ. ಇಷ್ಟಲಿಂಗದಲ್ಲಿಟ್ಟ ದೃಷ್ಟಿ, ಬಿಂದುವಿನ ಪರಿಪರಿಯ ಬಣ್ಣವ ನೋಡಿ ನೋಡಿ ದಣಿದು, ಶಿವಕಲಾರೂಪದಲ್ಲಿ ವ್ಯಾಪಿಸಿ, ಕಂಗಳ ಎವೆ ಮಾಟವಿಲ್ಲದೆ ಲಿಂಗಲಕ್ಷ್ಯವು ಕದಲದಂತಿದ್ದಡೆ ಕಾಲನ ಕಾಟವು ತೊಲಗಿ ಹೋಗುವುದಯ್ಯಾ. ಇಂತೀ ಸಾಧನತ್ರಯವು ಸಾಧ್ಯವಾದ ಶರಣಂಗೆ ಕಾಲ-ಕಾಮ-ಪುರವೈರಿಯಾದ ನಮ್ಮ ಕೂಡಲಚೆನ್ನಸಂಗಯ್ಯನು ಮನ್ನಣೆಯ ಮುಕ್ತಿಯನೀವನು.