Index   ವಚನ - 1623    Search  
 
ಶಮೆ ದಮೆ ತಿತಿಕ್ಷೆ ಉಪರತಿ ಶ್ರದ್ಧೆ ಸಮಾಧಿ ಸಾಧನಸಂಪನ್ನನಾಗಿ ಸದ್ಗುರುವನರಸುತ್ತ ಬಪ್ಪ ಶಿಷ್ಯನ ಸ್ಥೂಲತನುವಿನ ಕಂಗಳ ಕೊನೆಯಲ್ಲಿ ಇಷ್ಟಲಿಂಗವ ಧರಿಸಿ; ಸೂಕ್ಷ್ಮತನುವಿನ ಮನದ ಕೊನೆಯಲ್ಲಿ ಪ್ರಾಣಲಿಂಗವ ಧರಿಸಿ; ಕಾರಣ ತನುವಿನ ಭಾವದ ಕೊನೆಯಲ್ಲಿ ತೃಪ್ತಿಲಿಂಗವ ಧರಿಸಿ, 'ಸರ್ವೇಂದ್ರಿಯಾಣಾಂ ನಯನಂ ಪ್ರಧಾನಮ್ʼ ಎಂಬ ಕಂಗಳ ಇಷ್ಟಲಿಂಗಕ್ಕೆ ಸಮರ್ಪಿಸಿ, 'ಇಂದ್ರಿಯಾಣಾಂ ಮನೋನಾಥಃ' ಎಂಬ ಮನವನು ಪ್ರಾಣಲಿಂಗಕ್ಕೆ ಸಮರ್ಪಿಸಿ; ಪ್ರಾಣ ಭಾವವ ತೃಪ್ತಿಲಿಂಗಕ್ಕೆ ಸಮರ್ಪಿಸಿ, 'ಮನೋದೃಷ್ಟ್ಯಾ ಮರುನ್ನಾಶಾದ್ರಾಜಯೋಗಫಲಂ ಭವೇತ್' ಎಂಬ ರಾಜಯೋಗ ಸಮರಸವಾದಲ್ಲಿ- ಅಂಗ ಲಿಂಗ, ಲಿಂಗವಂಗವಾಗಿ ಶಿಖಿ ಕರ್ಪೂರಯೋಗದಂತೆ ಪೂರ್ಣಾಪೂರ್ಣ ದ್ವೈತಾದ್ವೈತ ಉಭಯ ವಿನಿರ್ಮುಕ್ತವಾಗಿ 'ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ' ಎಂಬ ನಿಜದಲ್ಲಿ ನಿವಾಸಿಯಾದರು, ಕೂಡಲಚೆನ್ನಸಂಗಾ ನಿಮ್ಮ ಶರಣರು.