Index   ವಚನ - 51    Search  
 
ರಕ್ತವಿರಕ್ತರು ತೊತ್ತಿನ ತಲೆಯ ಸಿಂಬಿಯ ರೂಢಿಯಾದರಯ್ಯ. ಹೊತ್ತಿದ್ದ ಮಸ್ತಕವ ಮುಟ್ಟಿ ಮುಟ್ಟದೆ ತಟ್ಟಿ ತಟ್ಟದೆ, ಪ್ರಸ್ತಾಯದ ಮೃತ್ತಿಕೆಯ ಮುಟ್ಟಿ ಮುಟ್ಟದೆ ತಟ್ಟಿ ತಟ್ಟದೆ, ಎತ್ತಲೆಂದರಿಯದೆ ತತ್ವಹೋಕರಾದರಯ್ಯ. ಹೊತ್ತ ಮೃತ್ತಿಕೆಯೆಂಬಾದಿಗಲೆ(ಯೆಂಬುದೀಗಲೆ?) ತನು, ಉತ್ತಮಾಂಗವ ಮನ, ಅತ್ತಿತ್ತ ಎರಡರ ಮಧ್ಯವೆ(ದ?) ಸಂವ ಸಿಂಬಿಯ ಅರಿವೆ. ಮುಕ್ತರಾದರು ಮೋಹಿವಿರಕ್ತರು. ರಂಬೆ ಸಿಂಬಿಯೊಳು ಸತ್ತವೆಲ್ಲ ಹೆಣ, ಅತ್ತ(ತ್ತು?)ವೆಲ್ಲ ತೃಣ ಇತ್ತ ಹೋಗಲಾಡಿ ಅತ್ತಲರಸುವ ಕತ್ತೆಗಳು ವಿರಕ್ತರೆನಬಹುದೇನಯ್ಯ? ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.