ಹೊನ್ನೆಯ ಹುಳುವ ಕಂಡು,
ಕುನ್ನಿ ತನ್ನ ಬಾಲವ ಸುಟ್ಟುಕೊಂಡಲ್ಲಿ,
ತೊನ್ನಾಗಿ ಹುಳಿತು ಕೊಳೆತು ಹೋಪುದಲ್ಲದೆ
ಹೊನ್ನೆಯಂತೆ ಹೊಳೆವುದೇ?
ಧನ್ಯರಾಗಬೇಕು ನುಡಿ ನಡೆ ಕೇಳಿ ಕಂಡು.
ಇನ್ನು ಹೋಲುವೆಗೆ ವೇಷವ ತಾಳಿದರೆ ಕ್ಲೇಶ ತೊಳೆವುದೆ?
ದಿನ್ನಾರಿ ಹೊನ್ನಿನ ತೂಕ ಬಣ್ಣ ಹೊನ್ನಿನೊಳಿಪ್ಪುದೆ?
ಸನ್ನಿಹಿತ ಲೋಕಕ್ಕೆ ಸಂಗನಶರಣ ವಿರಹಿತ.
ಇನ್ನವರ ಪ್ರಭೆ ಸರ್ವಲೋಕಕ್ಕೆ; ಕೀಳಾದ ಬಳಿಕ ಮೇಲು.
ಮುನ್ನ ಹೊಲಗೇರಿಯೊಳು ಅಕ್ಕುಲಜರ ಹುಟ್ಟು.
ಹನ್ನಿಬ್ಬರ ಬಾಯಿಗೆ ಮುಚ್ಚಳ, ಮುಗಿದ ಕೈಗೆ ಇಕ್ಕಳ.
ತನ್ನ ತಾನರಿತವನ ಜ್ಞಾನ, ಜಗಭರಿತನ ಭಕ್ತಿ ಕಾಣಾ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.