Index   ವಚನ - 104    Search  
 
ಕುಲ ಅಕ್ಕುಲವೆಂಬ ಕುಮಂತ್ರಿಗಳು ಕೇಳಿರಯ್ಯ, ಕುಲಜನ ಮೈಯಲ್ಲಿ ಹಾಲು, ಅಕ್ಕುಲಜನ ಮೈಯಲ್ಲಿ ರಕ್ತವಿಪ್ಪುದೆ? ಕುಲಭೇದವ ಮಾಡುವ ಅನ್ಯಾಯಿಗಳಿರಾ, ಕಲಿಕೆಯ ಮಾತು, ಕಾತರ, ಭೂತಪ್ರಾಣಿಗೆ ಸೂತಕ. ಕುಲವು ಮಲಭಾಂಡವು, ಮಾರ್ಗ ಒಂದು ಮೂತ್ರಕುಕ್ಷೆಯಲ್ಲಿ ಹುಟ್ಟು. ಮಾಯಾ ಮೋಹ ಬಿಲ ನವದ್ವಾರದೊಳು, ಸಿ(ಸು?)ಳ್ಳು, ಸಿಂಬಳ, ಕುಗಿನಿ ಕಿಣಿ(ಕೂಕಣಿ ಕುಣಿ?), ಜಲಮಲ ಕುಲಜ ಅಕ್ಕುಲಜನೆಂತಿಪ್ಪನು? ಕುರುಹಾವುದು? ಸಲೆ ಶಿವನೊಪ್ಪಿದುದೆ ಕುಲ, ಒಪ್ಪದುದೆ ಅಕ್ಕುಲ. ಬಲೆಯೊಳು ಸಿಲಿಕದೆ ಬಯಲು ಹಂಗನೆ ಬಿಟ್ಟು, ಚನ್ನನ ಕುಲಕೆ ಸರಿಯಲ್ಲ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.