ಪಂಚಕಳಸ ಪಂಚಕಳಸ ಎಂದೆಂಬರು ನೋಡಯ್ಯ,
ಪಂಚಕಳಸಕ್ಕೆ ಹಿರಿದಾವುದು ಕಿರಿದಾವುದು ಎಂದರಿಯರು.
ಪಂಚಕಳಸದ ನಾಲ್ವರ ನಡುವೆ ಇಪ್ಪುದೀಗಲೆ
ಆ ನಾಲ್ಕಕ್ಕೆ ಗುರು ಬಸವೇಶ್ವರನು.
ಆ ನಾಲ್ಕಕ್ಕೆ ದೀಕ್ಷೆ ಕೊಟ್ಟಾತನೀಗಲೆ ಗುರು ಬಸವೇಶ್ವರನು.
ಆ ನಾಲ್ವರಾರೆಂದರೆ-
ರೇವಣಸಿದ್ಧೇಶ್ವರ, ಮರುಳಸಿದ್ಧೇಶ್ವರ, ಏಕೋರಾಮೇಶ್ವರ,
ಪಂಡಿತಾರಾಧ್ಯ
ಇಂತೀ ನಾಲ್ವರಿಗೆ ಗುರು ಬಸವೇಶ್ವರನು.
ರೇವಣಸಿದ್ಧೇಶ್ವರಗೆ ಚಿನ್ನದ ಲಿಂಗವ ಕೊಟ್ಟ ಕಾರಣದಿಂದ
ಬಸವೇಶ್ವರನೆ ಗುರುವಾದ.
[ಮರಳುಸಿದ್ಧೇಶ್ವರಗೆ] ಬೆಳ್ಳಿಯ ಲಿಂಗವ ಕೊಟ್ಟ ಕಾರಣದಿಂದ
ಬಸವೇಶ್ವರನೆ ಗುರುವಾದ.
ಏಕೋರಾಮೇಶ್ವರಗೆ ತಾಮ್ರದ ಲಿಂಗವ ಕೊಟ್ಟ ಕಾರಣದಿಂದ
[ಬಸವೇಶ್ವರನೆ ಗುರುವಾದ]
ಪಂಡಿತಾರಾಧ್ಯರಿಗೆ ಶಿಲೆಯ ಲಿಂಗವ ಕೊಟ್ಟ ಕಾರಣದಿಂದ
ಬಸವೇಶ್ವರನೆ ಗುರುವಾದ.
[ಇಂತು] ನಿಮ್ಮ ಶರಣ ಬಸವಣ್ಣನು
ಪರಮಗುರುವಾದ ಕಾಣಯ್ಯ
ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.