Index   ವಚನ - 173    Search  
 
ಮುರವು ಮುದ್ರೆ ಲಾಂಛನ ಹೊತ್ತು, ಧರೆಯ ಮೇಲೆ ತಿರುಗುವ ಅಣ್ಣಗಳಿರಾ, ನೀವು ಕೇಳಿರಯ್ಯ: ಗುರುಸ್ಥಲದ ಕಿರೀಟವೆಂತು, ದಂಡವೆಂತು, ಕಮಂಡಲವೆಂತು, ಕಪ್ಪರವೆಂತು? ಮರವೆಯ ನರರು ನೀವರಿಯಿರಯ್ಯ. ಹರಿಸುರರಿಗೆ ಅಳವಲ್ಲದ ರೂಪುಧರಿಸಿ, ಕರಿಯ ಕಂಬಳಿಯ ಕಂಥೆಯ ಮುರಿದು, ಎರೆಯುವ (ಹೆರರ?) ಕಟ್ಟಿಗೆ ದಂಡವೆ? ಪರವಸ್ತುವಿನ ಕಪ್ಪರ ಮಣ್ಣುಮಾಟವೆ? ತುರೀಯ ಚಿತ್ತದಲ್ಲಿ ಗುರುವು ನಾನೆಂದಲ್ಲಿ, ಅರುಹುಗೆಟ್ಟಿತು ಕಾಣಯ್ಯ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.