ಈ ಪರ ಶಕ್ತಿಯೊಡನೆ ಕೂಡಿದ ಮಹಾಲಿಂಗವನು
ಸಮಸ್ತವಾದ ಮಹಾದಾದಿ ತತ್ವಗಳಿಂಗೆ ಆಸ್ಪದವಾದುದೆಂದು
ಶಿವತತ್ವ್ತಜ್ಞಾನಿಗಳು ತಿಳಿಯುತ್ತಹರಯ್ಯ; ಆ ಮಹಾಲಿಂಗದಿಂದೆ
ಚರಾಚರಾತ್ಮಕ ಲೋಕವೆಂಬ ತತ್ವವು ಹುಟ್ಟುತ್ತಿಹುದಯ್ಯ
[ಶಾಂತವೀರೇಶ್ವರಾ]
ಅಂತು ಸ್ಥಲ ನಿರ್ದೇಶನ, ಶೂನ್ಯಲಿಂಗ, ನಿಃಕಲಲಿಂಗ, ಮಹಾಲಿಂಗವೆಂಬ
ಚತುಃಸ್ಥಲಂಗಳಿಗೆ ಸೇರಿದ ವಚನ ಗಣನೆ 38ಕ್ಕಂ.
ಇದು ಸಕಲಪುರಾಣೋಕ್ತಿ ವೇದಗಮ ಪುರಣೋಪನಿಷದ್ವಾಚ್ಯ ಪ್ರತಪಾದಿತಾರ್ಥ ಪ್ರತಿಷ್ಠಾಚಾರ್ಯವರ್ಯ ದ್ವಿತೀಯ ಮುರಿಗಾಖ್ಯ ಶಿವಯೋಗೀಂದ್ರ ಜ್ಞಾನ ಪ್ರಸನ್ನಾರ್ಹ ಷಟ್ಸ್ಥಲಾಚಾರ್ಯ ಸಿದ್ಧಲಿಂಗಾಖ್ಯ
ಶಿವಯೋಗೀಶ್ವರ ಷಟ್ ಸ್ಥಲ ಜ್ಞಾನಪ್ರಸಾದ ಸಂತೃಪ್ತ ಷಟ್ ಸ್ಥಲಾದ್ವೈತ ವಿದ್ಯಾಪ್ರಮೋದಿತ ಬಾಲೇಂದುಪುರ ಶಾಂತವೀರೇಶ್ವರ ಕರಸರಸಿಜ ಸಂಭವ ಪರ್ವತ ಶಿವಯೋಗಿ ನಿರೂಪಿತ ಮುಕ್ತಚರಿತಮಪ್ಪ ಏಕೋತ್ತರ ಶತಸ್ಥಲದೊಳು ನಿರ್ದೇಶ ಶೂನ್ಯ ನಿಃಕಲ ಮಹಾಲಿಂಗಂಗಳ ಚತುಸ್ಥಲ ಸಮಾಪ್ತ.
ಮಂಗಳ ಮಹಾ ಶ್ರೀ ಶ್ರೀ ಶ್ರೀ
ಸೂತ್ರ: ಇಂತು ಶಿವಾಂಶವಾದ ಜೀವನು ದೇವ ಜಾತಿ ಅಡ್ಡಲಾದ ಶರೀರವುಳ್ಳ ಪಶು ಮೃಗ ಜಾತಿ ಮೊದಲಾದ ಮನುಷ್ಯನ ಜಾತಿ ಭೇದವನೆಯ್ದಿರುತ್ತಂ ಇಹನು. ಆ ಮಾಯೆಗೊಡೆಯನಾಗುತ್ತಂ ಇದ್ದಂಥ ಶಿವನು ಆ ಜೀವರುಗಳ ಹೃದಯಲ್ಲಿರ್ದು ಪ್ರೇರೇಪಿಸುತ್ತಿಹನಾಗಿ ಮುಂದೆ ‘ಪಿಂಡಸ್ಥಲ’ವಾದುದು. ಇನ್ನು ಮುಂದೆ ಶಿವಸಿದ್ಧಾಂತವ ಸ್ಥಾಪಿಸುತ್ತಿರ್ದುಪಂ. ಆ ಶಿವ ಸಿದ್ಧಾಂತವನು ಪ್ರತಿಪಾದಿಸಲೋಸುಗವಾಗಿ ಸಿದ್ಧಾಂತಗಳನ್ನು ಬಹುವಿಧದಿಂದೆ ಪೇಳುತಿರ್ದಪಂ; ಆ ಸಿದ್ಧಾಂತಗಳನ್ನು ತೋರಿಸುತಿರ್ದಪಂ.