Index   ವಚನ - 72    Search  
 
ಪೂರ್ವೋಕ್ತವಾದ ಚಿರಂ ಅಚಿರಂ ನಿರ್ವಾಣ ದೀಕ್ಷೆಯಿಂ ದೀಕ್ಷಿತನಾದ ವೀರಶೈವನು ಜೀವನ್ಮುಕ್ತನೆನಸಿಕೊಂಬನು, ಸಾಲೋಕ್ಯ ಸಾಮೀಪ್ಯ ಸಾರೂಪ್ಯ ಸಾಯುಜ್ಯಂಗಳೆಂಬ ಚರ್ತುವಿಧ ಮೋಕ್ಷಂಗಳೊಳಗೆ ಸಾಲೋಕ್ಯಾದಿ ತ್ರಿವಿಧ ಪದಸ್ಥರಾದ ಮಂತ್ರೇಶ್ವರ ಮಂತ್ರ ಮಾಹೇಶ್ವರ ಭುವನೇಶ್ವರ ಮೊದಲಾದವರು ಅಪರ ಮುಕ್ತರೆನಿಸಕೊಂಬರು. ಸಾಯುಜ್ಯ ಮುಕ್ತರು ಪರಮುಕ್ತರೆನಿಸಿಕೊಂಬರು. ಅವರೊಳು ಜೀವನ್ಮುಕ್ತನಂ ಪೇಳಿತಿರ್ದಪಂ: ಅಚಿರಂ ನಿರ್ವಾಣ ದೀಕ್ಷೆ ಆವಾತನಲ್ಲಿರುತಿರ್ದುದು, ಆತನ ಜೀವನವು ಹುರಿದ ಬೀಜವೆಂತಂತೆ ಮರಳಿ ಜಗಕೆ ಬಾರದಂಥದ್ದು. ಆತನ ಸಂಸಾರ ದರ್ಶನವು ಪ್ರಾರಬ್ಧ ಕರ್ಮಭೋಗವೆ ಕಡೆಯಾಗಿದುವಂಥದ್ದು, ಅಂತಪ್ಪ ವೀರಮಾಹೇಶ್ವರನು ತನ್ನ ದೇಹಾವಸಾನದಲ್ಲಿಯೆ ಶಿವನೆಂತಂತೆ ಪರಮುಕ್ತಿಯನೆಯ್ದವ ಕಾರಣ ಜೀವನ್ಮುಕ್ತನೆನಿಸಿಕೊಂಬನು. ಇಂತೆಂದು ‘ಸ್ಕಾಂದ ಪುರಾಣ’ ಸಾಕ್ಷಿ: “ಸಾಯಸ್ಮಿನ್ವರ್ತತೇ ತಸ್ಯ| ಜೀವನಂ ಭ್ರಷ್ಟಂ ಬೀಜವತ್| ಜೀವನ್ಮಕ್ತಃ ಸ ಭಕ್ತಸ್ತು ಪರಮುಕ್ತಃ ಶಿವೋಯಥಾ||” ಎಂದು ಆ ಜೀವನ್ಮುಕ್ತರ ಅಂಗಸ್ಥಲ ಲಿಂಗಸ್ಥಲಗಳೆಂಬ ನೂರೊಂದು ಸ್ಥಲಗಳನು ಪೇಳುತಿದ್ದನಯ್ಯ ಶಾಂತವೀರೇಶ್ವರಾ ಇದು ಸಕಲ ಪುರಾತನೋಕ್ತಿ ವೇದಾಗಮ ಪೂರಾಣೋಪನಿಷದ್ವಾಚ್ಯ ಪ್ರತಿಪಾದಿತಾರ್ಥ ಪ್ರತಿಷ್ಠಾಚಾರ್ಯಾವರ್ಯ ದ್ವಿತೀಯ ಮುರಿಗಾಖ್ಯ ಶಿವಯೋಗೀಂದ್ರ ಜ್ಞಾನ ಪ್ರಸನ್ನಾರ್ಹ ಶಟ್ಸ್ಥಲಾಚಾರ್ಯ ಸಿದ್ಧಲಿಂಗಾಖ್ಯ ಶಿವಯೋಗೀಶ್ವರ ಷಟ್ಸ್ಥಲ ಜ್ಞಾನಪ್ರಸಾದ ಸಂತೃಪ್ತ ಷಟ್ಸ್ಥಲಾದ್ವೈತ ವಿದ್ಯಾ ಪ್ರಮೋದಿತ ಬ್ಯಾಲೇಂದುಪುರ ಶಾಂತವೀರೇಶ್ವರ ಕರಸರಸಿಜ ಸಂಭವ ಪರ್ವತ ಶಿವಯೋಗಿ ನಿರೂಪಿತ ಮುಕ್ತ ಚರಿತಮಪ್ಪ ಎಕೋತ್ತರ ಶತಸ್ಥಲದೋಳ್ ನಿರ್ದೇಶ ಶೂನ್ಯ ನಿಃಕಲ ಮಹಾಲಿಂಗ ಪೀಠಿಕಾ ಸ್ಥಲಂಗಳಿಗೆ ಸೇರಿದ ವಚನ 53ಕ್ಕಂ ಮಂಗಳಮಸ್ತು