Index   ವಚನ - 75    Search  
 
ಪರಮೇಶ್ವರನೆ ಪರಬ್ರಹ್ಮವೆಂದು ಹೇಳಲಾಗಿತ್ತು ಶಕ್ತಿಯ ಲಿಂಗವೆಂದು ಹೇಳಲಾಗಿತ್ತು ಆ ಶಿವ ಶಕ್ತಿಯ ಕೂಟವು ಲೋಕದ ಉತ್ಪತ್ತಿಯ ಪ್ರಯೋಜನಕ್ಕೆ ಹೇತುವೆಂದು ಹೇಳಲಾಗುವುದು. ಕರ್ತೃಸಾಧಾಖ್ಯ, [ ಕರ್ಮಸಾದಾಖ್ಯ], ಮೂರ್ತಿಸಾದಾಖ್ಯ ಅಮುರ್ತಿ ಸಾದಾಖ್ಯವೆಂಬ ನಾಲ್ಕು ಸಾದಾಖ್ಯಗಳು ಬರಿಯ ನಾದಬ್ರಹ್ಮವೆಂದು ಹೇಳಲಾಗುವುದು. ಆ ನಾದ ಬ್ರಹ್ಮವೆನಿಪ್ಪ ಶಿವತತ್ವಲಿಂಗವೆಂದು ಅರಿಯುವುದು. ಜ್ಞಾನ ಶಕ್ತ್ಯಾದಿ ಚತುರ್ವಿಧವಾದ ಶಕ್ತಿಯು ಆ ನಾದಬ್ರಹ್ಮಲಿಂಗಕ್ಕೆ ಪೀಠವೆಂದು ಹೇಳಲಾಗಿತ್ತು. ಅದು ಕಾರಣದಿಂದೆ ಪ್ರಸಾದ ಮಂತ್ರ ಸ್ವರೂಪವು ಸಮಸ್ತ ಕಾರಣಂಗಳಿಗೆ ಕಾರಣವಾದ ಸದಾಶಿವತತ್ವವೆಂದು ಹೇಳಲಾಗಿತ್ತು. ಹೀಗೆಂದು ಸಮಸ್ತ ಶಾಸ್ತ್ರಗಳಲ್ಲಿಯೂ ದೃಢೀಕರಿಸಲಾಗಿತ್ತಯ್ಯ ಶಾಂತವೀರಪ್ರಭುವೇ, ಸೂತ್ರ: ಪಿಂಡೆ ಶರೀರಂ ಸದೃಶ್ಯಶರೀರಂ ಎಂದು ಪಿಂಡ ಶಬ್ದಕ್ಕನೇಕಾರ್ಥಮುಂಟಾದರೂ ದೇಹವೆಂಬ ನಾಮ ಪ್ರಸಿದ್ಧಂ. ಅನಂತರದಲ್ಲಿ ಸಮಸ್ತ ವೇದಾಗಮಂಗಳ ಶಿರಸ್ಸಿದ್ಧವಾದ ಅಂಗಷಡುಸ್ಥಲ ಲಿಂಗಷಡುಸ್ಥಲಾಚಾರವಾಗಿರ್ದ ಪಿಂಡಜ್ಞಾನಾದಿ ಜ್ಞಾನಶೂನ್ಯಾಂತವಾದ ಶತಸ್ಥಲಂಗಳೆ ಮುಖ್ಯವಾದ ಪಿಂಡಸ್ಥಲವನು ಪೇಳುತಿರ್ದಪಂ.