Index   ವಚನ - 192    Search  
 
ಬಳಿಕ, ಲಲಾಟದಲ್ಲಿ ತ್ರಿಪುಂಡ್ರ ಧಾರಣಮಂ ದಕ್ಷಿಣ ಕರದ ಮಧ್ಯಮ ಅನಾಮಿಕ ಅಂಗುಷ್ಠವೆಂಬ ಅಂಗುಲಿತ್ರಯದಿಂದ ಅನುಲೋಮ ವಿಲೋಮದಿಂದಲಾದರೂ, ಅಲ್ಲದೆ, ಅಕಾರವೆ ಅನಾಮಿಕ, ಉಕರವೆ ಮಧ್ಯಮ, ಮಕರವೆ ತರ್ಜನಿ ಎಂಬ ಭಾವನೆಯಿಂದ [ಅನಾಮಿಕ] ಮಧ್ಯಮಾಂಗುಲಿತ್ರಯದಿಂದಾದರೂ ಅಗ್ನಿತ್ರಯ, ಅಕ್ಷರತ್ರಯ, ಗುಣತ್ರಯ, ಲೋಕತ್ರಯ, ಆತ್ಮತ್ರಯ, ವೇದತ್ರಯ, ಕಾಲತ್ರಯ, ರುದ್ರೇಶ್ವರ ಸದಾಶಿವರೆಂಬ ದೇವತ್ರಯಾತ್ಮಕವೆಂಬನುಸಂಧಾನ ಪೂರ್ವಕವಾಗಿ ಷಡುಂಗುಲ ಪ್ರಮಾಣಮಾಗಿ ತ್ರಿರೇಖೆಗಳಂ ನೇತ್ರಯುಗ್ಮ ಪ್ರಮಾಣವಾಗಿ ಲಲಾಟಾಂತಮಾಗಾದರೂ ಕಠಿಣ ಮಲಿನ ವಕ್ರ ಭಿನ್ನ ದೂರಬೆರಕೆ ಎಂಬಾರು ದೋಷಮಿಲ್ಲದೆ, ನಯ ಶುಭ್ರ ನೇರ ಸಾಂದ್ರ ಸಮೀಪ ಭಿನ್ನಮೆಂಬಾರು ಲಕ್ಷಣಯುಕ್ತಮಾಗಿ ಧರಿಸುವಲ್ಲಿ ಬ್ರಾಹ್ಮಣರಿಗೆ ಆರಂಗುಲ, ಕ್ಷತ್ರಿಯಂಗೆ ನಾಲ್ಕಂಗುಲ, ವೈಶ್ಯಂಗೆ ಎರಂಡಗುಲ, ಶೂದ್ರಂಗೆ ಒಂದಂಗುಲ ಪ್ರಮಾಣದಿಂದ ತ್ರಿಪುಂಡ್ರಮಂ ಧರಿಸುವುದೆ ಧಾರಣಮಕ್ಕುಮಯ್ಯ ಶಾಂತವೀರೇಶ್ವರಾ