Index   ವಚನ - 205    Search  
 
ಏಕಮುಖದ ಮಣಿಯ ಪರಶಿವನು, ಬ್ರಹ್ಮಹತ್ಯಾದಿ ಪಾತಕಮಂ ಕೆಡಿಸಿ ಸರ್ವ ಸಿದ್ಧಿಯನೀವುದು, ದ್ವಿಮುಖದ ಮಣಿಯೆ ಈಶ್ವರೀಶಾನರು ಗೋವಧೆಯಂ ಪರಿಹರಿಸುವುದು, ತ್ರಿಮುಖದ ಮಣಿಯ ಅಗ್ನಿ ಸ್ತ್ರೀವಧೆಯಂ ದಹಿಸೂದು, ಚತುರ್ಮುಖದ ಮಣಿಯೆ ಚತುರ್ಮುಖನು. ಪುರುಷ ವಧೆಯಂ ತೊಲಗಿಸೂದು, ಪಂಚಮುಖದ ಮಣಿಯ ಸದಾಶಿವನು ಅಭಕ್ಷ ಭಕ್ಷಣಾದಿ ದೋಷಮಂ ವರ್ತಿಸೂದು, ಷರ್ಣ್ಮುಖದ ಮಣಿಯೆ ಷಣ್ಮುಖನು ಭ್ರೂಣಹತ್ಯಾದಿ ಪಾಪಕರ್ಮಮಂ ಕೆಡಿಸೂದು, ಸಪ್ತ ಮುಖದ ಮಣಿ ಅನಂತನು ಗೋವಧೆ ಸುರ್ವಣಸ್ತೇಯಾದಿ ಕಲುಷಮಂ ಕ್ಷೀಣಿಸೂದು, ಅಷ್ಟಮುಖದ ಮಣಿಯ ವಿಘ್ನೇಶ್ವರನು ಸಮಸ್ತ ಪಾತಂಕಗಳನುರುಹಿ ಸರ್ವವಿಘ್ನಂಗಳ ನಿವಾರಿಸ ಪರಮ ಪದವೀವುದು, ನವಮುಖದ ಮಣಿಯ ಭೈರವನು ಸಕಲ ಕಲ್ಮಷಮಂ ಕಳೆದು ಭಕ್ತಿ ಮುಕ್ತಿಗಳಂ ಕೊಡುವುದು, ದಶಮುಖ ಮಣಿಯೆ ಮಾಧವನು ಭೂತ ಬೇತಾಳ ಮಾರಿಗಣ ಬ್ರಹ್ಮರಾಕ್ಷಸ ಪನ್ನಗಾದಿ ಭೀತಿಯಂ ಬಿಡಿಸೂದು, ಏಕಾದಶ ಮುಖದ ಮಣಿಯ ಏಕಾದಶ ರುದ್ರರು ಅಶ್ವಮೇಧಾದಿ ಪುಣ್ಯಂಗಳನು ಈವುದು, ದ್ವಾದಶ ಮುಖದ ಮಣಿಯೆ ದ್ವಾದಶಾದಿತ್ಯರು ಅಗ್ನಿಚೋರ ವ್ಯಾಘ್ರ ಖಡ್ಗಾದಿ ಬಾಧೆಗಳಂ ನಿವಾರಿಸಿ ವ್ಯವಹಾರ ಸಿದ್ಧಿ, ಸುವರ್ಣ ದಾನಾದಿ ಫಲಂಗಳನೀವುದು, ತ್ರಯೋದಶ ಮುಖದ ಮಣಿಯ ಮಹೇಶ್ವರನು ಮಾತಾಪಿತರುಗಳ ವಧೆಯಿಂದಾದ ದುಃಕೃತಿಯ ವಿದಾರಿಸಿ ರಸ ರಸಾಯನವಾದ ವಶ್ಯಾದಿಗಳ ಫಲಿಸೂದು, ಚತುರ್ದಶ ಮುಖದ ಮಣಿ ಮನುಗಳು ಸಕಲ ದೇವತಾ ಪೂಜ್ಯತ್ವಪ್ರದವೆಂದರಿವುದು. ಏಕ ಮುಖದ ಮಣಿ ಮೊದಲಾಗಿ ಚತುರ್ದಶ ಮುಖದ ಮಣಿ ಪರ್ಯಂತರಂ ‘ಓಂ| ಹ್ರಾಂ| ಲಾಂ| ಓಂ | ಹ್ರೀಂ | ಹ್ರೂಂ| ಹೌಂ| ಶ್ರೀಂ| ಹ್ರೀಂ| ಮಂ| ವಂ| ಕ್ಷೋಂ| ಹಂ | ಉರಂ’ ಎಂಬ ಕ್ರಮಾದಿಂದಾಯಾಮ ಮಂತ್ರ ಪೂರ್ವಕವಾಗಿ ಧರಿಸೂದು. ಆ ರುದ್ರಕ್ಷೆಗಳಂ, ಬ್ರಾಹ್ಮಣಾದಿಗಳೆಲ್ಲರೂ ಸಂಧ್ಯಾ ವಂದನಾದಿ ಕ್ರಿಯೆಗಳಲ್ಲಿ ಧರಿಸಬೇಕೆಂದು ನಿರ್ಧರಿಸಿರುವುದಯ್ಯ ಶಾಂತವೀರೇಶ್ವರಾ