ಮನುಷ್ಯರು ಒಂದು ವರ್ಷ
ದೇವತೆಗಳಿಗೆ ಒಂದು ದಿವಸ 21600 ಗಳಿಗೆ.
ಆ ಲೆಕ್ಕದಲ್ಲಿ ಮನುಷ್ಯರಿಗೆ ದಿನ ಒಂದಕ್ಕೆ
21600 ಆತ್ಮ ಪ್ರಸಾದ ಹಂಸ ಮಂತ್ರವು
ನಿಚ್ಛ್ವಾಸೋಚ್ಛ್ವಾಸ ಸ್ವರೂಪವಾಗಿ
ಶಿವಾಜ್ಞೆಯಿಂದ ಪ್ರಕೃತ ಪ್ರಾಣಾಯಾಮ
ರೂಪವಾಗಿ ಚರಿಸುತ್ತಿಹುದಯ್ಯ.
ಆ ಹಂಸ ಮಂತ್ರವನು ವೈಕೃತ್ವ ಪ್ರಾಣಾಯಾಮದಿಂದ
‘ಯೋ ಸಾಹಾಸಯೋ ಲೋಪ’ ಎಂದು
‘ನಾಸಾ ಪುರುಷಃ ಸೋಹಂ’ ಎಂಬ ಶ್ರುತಿ
ಪರಸ್ಪರವಾಗಿ ಗುರೂಪದೇಶದಿಂದ
ಸಕಲ ನಿಃಕಲ ಜ್ಞಾನವಹುದೆಂದು
ಸ್ವಾನುಭಾವದಿಂದ ಸೋಹಂ ಎಂದು ಜಪಿಸಿ,
ಮೇಲೆ ಕೇವಲ ಕುಂಭಕದಿಂದೆ
“ಹಂಸ ಯೋರ್ಲೋಪಾತ್’ ಎಂದು
ಹ ಕಾರ ಸ ಕಾರಂಗಳಿಗೆ ಲೋಪವ ಮಾಡಲಾಗಿ,
ಲಿಂಗಾಂಗ ರೂಪವಾದ ಶಿವಜೀವೈಕ್ಯವು
ನಿಗಮ ಶಿರಸ್ಸಿದ್ಧವಾದ ಪರಮ ಮೋಕ್ಷವಯ್ಯ
ಶಾಂತವೀರೇಶ್ವರಾ