ಇನ್ನು ಮಂತ್ರಮೂರ್ತಿಗೆ
ಅವಯವಂಗಳಾವುವೆಂದೊಡೆ ಪೇಳ್ವೆಂ:
ಶಿವತತ್ವವು ಅದ್ವಯತತ್ತ್ವವೆಂದರಿವುದು,
ಪರಶಿವನೆನಿಸಿಕೊಂಬ ಶಿವತತ್ತ್ವವು ತಾನೆ
ಮಂತ್ರಮೂರ್ತಿಯಾಗಿಹನು, ಆ ಪರಮೇಶ್ವರಂಗೆ
‘ಹ’ ಕಾರವೆ ದೇಹ, ‘ಬಿಂದು’ವೆ ಮುಖ, ‘ನಾದ’ವೆ ಕಿರೀಟ,
ಹಾಂಗೆಯೆ ಶಾಂಭವಿ ರೇಖೆ ಎನಿಸುವ ಅಡ್ಡ ರೇಖೆಯ
ಉಭಯ ಶೃಂಗಗಳೆ ಆ ಶಿವಮೂರ್ತಿಗೆ ಭುಜಂಗಳು.
ಅಗ್ನಿ ರೇಖೆಗಳೆನಿಸುವ ‘ಹ’ ಕಾರವಾದ ಅಧೋ ರೇಖೆಗಳೆ
ಆ ಶಿವಮೂರ್ತಿಯ ಪಾದದ್ವಯವೆಂದರಿವುದು.
ಈ ಪ್ರಕಾರ ಶಿವಮಂತ್ರವು
ಶಿವದೇಹಾಕಾರವೆಂದು ಹೇಳುವರಯ್ಯ
ಶಾಂತವೀರೇಶ್ವರಾ