Index   ವಚನ - 264    Search  
 
ವಟ ಬೀಜದಂತೆ ಮಹಾರ್ಥಮುಳ್ಳುದಾಗಿ ಸಕಲ ಶಿವಭಕ್ತಿರ್ಗೆ ತಾನೆ ಜಪಿಸಲು ಯೋಗ್ಯವೆನಿಸಿ ಪ್ರಣವಪೂರ್ವಕವಾದ ಭೂತಾದಿ ಸಕಲ ಪಂಚ ವರ್ಗಾತ್ಮಕವಾದ ನಕಾರಾದಿ ಯಕಾರಾಂತವಾದ ಆರಕ್ಕರಗಳುಳ್ಳುದಾಗಿ ನಿಷ್ಪ್ರಯಾಸದಿಂದ ಭುಕ್ತಿ ಮುಕ್ತಿಪ್ರದಮಾಗಿಹುದು. ಆ ಪಂಚಾಕ್ಷರ ಮಂತ್ರಮಂ ಮೊದಲು ಶ್ರೀಗುರು ಮುಖ್ಯದಿಂದರ್ಥಸಮೇತಮಾಗರಿದು ಯಥಾಶಕ್ತಿಯಂ ಗುರುದಕ್ಷಿಣೆಯಂ ಕೊಟ್ಟು ಬಳಿಕ ಶ್ರೀ ಗುರುವಿನಾಜ್ಞೆಯಿಂದಾ ಮಂತ್ರಸಿದ್ಧಾರ್ಥಮಾಗಿ ಮುಂದೆ ಪೇಳ್ವ ಶುಭ ಮಾಸಾದಿ ವಿಧಿಗಳನಾರಯ್ದು ಬಳಿಕ ಜಲಸ್ನಾನ ಭಸ್ಮಸ್ನಾನಾದಿಗಳಂ ಮಾಡಿ ತನ್ನ ದೇಹದ ಬಲವರಿದು ದೇಹದ ಶಾಖಾ ಮೂಲ ಫಲ ಕ್ಷೀರಾದಿ ಮಿತ ಆಹಾರಿಯಾಗಿ ಬಳಿಕ ಅಕ್ಷರಕ್ಕೊಂದೊಂದು ಲಕ್ಷ ಜಪದಿಂ ದಿನವೊಂದಕ್ಕೆ ಹನ್ನೆರಡು ಸಾವಿರ ಜಪಂಗೆಯ್ವಾತನಾಗಿ ಹಾಲು ತುಪ್ಪದಿಂದಲಾದರೂ ಪಾಲಾಸ ಕುಸುಮದಿಂದಾದರೂ ಸಾವಿರ ಹೋಮವನು ಒಂದು ಲಕ್ಷ ತರ್ಪಣಮಂ ಪುರಾಣೋಕ್ತಿಯಿಂ ಮಾಡೂದು. ಅಲ್ಲದೆ ಮತ್ತೆ, ಕಲ್ಪೋಕ್ತಮಾದಿಪತ್ತುನಾಲ್ಕು ಲಕ್ಷ ಜಪವನಾದರೂ, ಪೂರ್ವೋಕ್ತ ಸಂಖ್ಯಾ ಕ್ರಮದಿಂ ಹೋಮ ತರ್ಪಣಂಗಳಂ ಪೆರ್ಚಿಸಿ ಮಾಡೂದಿಂತು ಪುರಶ್ಷರಣಂಗೈದು; ಮೇಲೆ ದಿನ ಒಂದಕ್ಕೆ ನೂರೆಂಟನಾದರೂ, ಇನ್ನೂರೈವತ್ತನಾದರೂ ಮುನ್ನೂರನಾದರೂ ಸಾವಿರವನಾದರೂ ಹನ್ನೆರಡು ಸಾವಿರವನಾದರೂ ಸಂಖ್ಯಾನಿಯಮ ಪೂರ್ವಕವಾಗಿ ನಿತ್ಯ ಜಪಂಗೆಯ್ಯಲ್ತಕ್ಕಂದಾ ಸಂಖ್ಯಾ ಹೀನ ಜಪಫಲಮಂ ರಾಕ್ಷಸರಪಹರಿಪರೆಂದರಿದು ಬಳಕ್ಕಿಲ್ಲಿ ಪುರಶ್ಚರಣಂಗೈಯದೆ ಸಂಖ್ಯಾ ನಿಯಮದಿಂದ ದೇಹಾಂತಮಾಗಿ ಮಾಳ್ಪುದೆ ನಿತ್ಯ ಜಪವದು ಕನಿಷ್ಠವೆನಿಸುವುದಯ್ಯ ಶಾಂತವೀರೇಶ್ವರಾ