Index   ವಚನ - 272    Search  
 
ಬಳಿಕ ಮೇಷಾದಿ ಮೀನಾಂತ್ಯಮಾದ ಹನ್ನೆರಡು ರಾಶಿಗಳೊಳಗೆ ಮೇಷ ಮಿಥುನ ಸಿಂಹ ತುಲಾ ಧನು ಕುಂಭವೆಂದಾರು ಆಶುಭಂಗಳು. ಮಿಕ್ಕ ಆರು ರಾಶಿಗಳೆಲ್ಲ ಶುಭಂಗಳು ಎಂದು ರಾಶಿಗಳ ಲೇಸು ಅ[ರಿ]ದ ಬಳಿಕ; ಪಾಡ್ಯ ಚತುರ್ಥಿ ಷಷ್ಠಿ ಅಷ್ಟಮಿ ನವಮಿ ಚತುರ್ದಶಿ ಹುಣ್ಣಿಮೆ ಅಮವಾಸೆ ಎಂಬೆಂಟು ತಿಥಿಗಳೆ ಅಶುಭಂಗಳು, ಉಳಿದೇಳು ತಿಥಿಗಳೆ ಶುಭಂಗಳು ಎಂದು ತಿಥಿಗಳಂ ಪಥಿಕರಿಸಿ; ಬಳಿಕ ಅದಿತ್ಯವಾರ, ಮಂಗಳವಾರ ಶನಿವಾರಂಗಳೆ ಆಶುಭಂಗಳು ಮಿಕ್ಕವೆಲ್ಲಾ ಶುಭಂಗಳೆಂದು ವಾರಗಳನಾರಯ್ದು, ಬಳಿಕ ಅಶ್ವಿನಿ ಮೊದಲಾದ ಇಪ್ಪತೇಳು ನಕ್ಷತ್ರಂಗಳೊಳಗೆ ಮಘಾ ಮೃಗಶೀರ ಹಸ್ತ ಸ್ವಾತಿ ಮೂಲ ಅನುರಾಧ ರೋಹಿಣಿ ರೇವತಿ ಉತ್ತರೆ ಉತ್ತಾಷಾಢ ಭಾದ್ರಪದೆ ಎಂಬ ಹನ್ನೊಂದು ಶುಭ ನಕ್ಷತ್ರಗಳು, ಉಳಿದವೆಲ್ಲ ಅಶುಭಂಗಳು ಎಂದು ನಕ್ಷತ್ರಂಗಳನು ಪರೀಕ್ಷಿಸಿ, ಬಳಿಕ ನಿಷ್ಕಂಟಾದಿ ವೈಧ್ರುತಿ ಕಡೆಯಾದ ಇಪ್ಪತ್ತೇಳು ಯೋಗಂಗಳೊಳಗೆ ನಿಷ್ಕಂಭ ಶೂಲ ಗಂಡ ಅತಿಗಂಡ ವ್ಯಾಘಾತ ವಜ್ರ ಧೃತಿ ಧ್ರುವ ವೈಧ್ರುತಿ ವ್ಯತಿಪಾತ ಪರಘವೆಂಬ ಏಕಾದಶ ಯೋಗಂಗಳೆ ಆಶುಭಂಗಳು. ಮಿಕ್ಕ ಹದಿನಾರು ಯೋಗಂಗಳೆ ಶುಭಂಗಳು ಎಂದು ಯೋಗಂಗಳಂ ಸಂಯೋಗಿಸಬೇಕಯ್ಯ ಶಾಂತವೀರೇಶ್ವರಾ