Index   ವಚನ - 337    Search  
 
‘ಎಲೈ ಪೂಜ್ಯನಾದ ಷಣ್ಮುಖನೆ, ಹುಳಗ[ಳಲ್ಲಿ] ಕೈಕಾಲುಳ್ಳ ಹುಳುಗಳು [ಅಧಿಕ] ಪಕ್ಷಿಗಳಿಗಿಂತ ಬುದ್ಧಿಯಿಂದೆ ನಾಲ್ಕು ಕಾಲುಳ್ಳ ಪಶುಗಳು ಅಧಿಕ. ಆ ಪಶುಗಳಿಗಿಂತ ಮನುಷ್ಯರು ಶ್ರೇಷ್ಠರು. ಆ ಮನುಷ್ಯರಲ್ಲಿ ಉಪನಯನಯುಕ್ತವಾದ ದ್ವಿಜಾತಿಗಳು ಅಧಿಕರು. ಮುಂಜಿಗಟ್ಟಿದಂಥ ಬ್ರಹ್ಮಚಾರಿಗಳಲ್ಲಿ ಪ್ರಾಜ್ಞರಾದವರು ಅಧಿಕರು. ಆ ವಿಪ್ರರಲ್ಲಿ ಯಜ್ಞವ ಮಾಡುವರಧಿಕರು. ಆ ಯಜ್ಞವ ಮಾಡುವಲ್ಲಿ ಯಜ್ಞವ ಮಾಡಿಸುವವರು ಅಧಿಕರು. ಅವರಿಂದ ಸನ್ಯಾಸಿಗಳಧಿಕರು. ಅವರುಗಳಿಂದ ವಿಶೇಷ ಜ್ಞಾನವುಳ್ಳವರಧಿಕರು. ಆ ವಿಶೇಷ ಜ್ಞಾನಿಗಳಲ್ಲಿ ಶಿವಲಿಂಗ ಪೂಜಕರಧಿಕರು. ಆ ಶಿವಲಿಂಗ ಪೂಜಕರಲ್ಲಿ ಎನ್ನ ಲಿಂಗಾಂಗ ಸಂಬಂಧವುಳ್ಳವರು ಶ್ರೇಷ್ಠರು. ಆ ಲಿಂಗಾಂಗ ಸಂಗಿಗಳಲ್ಲಿ ಷಟ್ಸ್ಥಲಜ್ಞಾನ ಲಕ್ಷಣವ ಬಲ್ಲಾತನು ಅಧಿಕನು. ಷಟ್ಸ್ಥಲ ಜ್ಞಾನಿಗಿಂತ ಶ್ರೇಷ್ಠನು ಮೂರು ಲೋಕಂಗಳಲ್ಲಿಯೂ ಯಾವಗಲೂ ಇಲ್ಲವೆಂದೀಶ್ವರನಿಂ ನಿರೂಪಿಸಲಾಗಿತ್ತಯ್ಯ ಶಾಂತವೀರೇಶ್ವರಾ