Index   ವಚನ - 350    Search  
 
ಲಿಂಗದಲ್ಲಿ ವಿಭೂತಿಯ ತಳಿವುದರಿಂದ ಭೂಮಿಯ ಶುದ್ಧವಾಗುತ್ತಿಹುದಯ್ಯ. ಹಾಂಗೆಯ ಲಿಂಗಸ್ನಾನದಿಂದ ಉದಕಂಗಳು ಶುದ್ಧವಾಗುತ್ತಿಹವಯ್ಯ. ಅಗ್ನಿ ಸೇವೆಯ ದೆಸೆಯಿಂದ ಅಗ್ನಿ ಶುದ್ಧವಾಗುತ್ತಿಹುದು. ಶಿವಂಗೆ ಸಮರ್ಪಿಸಿದ ಧೂಪವನೆತ್ತುವ ಕ್ರಿಯೆಯಿಂದ ವಾಯು ಶುದ್ಧವಾಗುತ್ತಿಹುದು. ಧೂಪದ ಹೊಗೆಯಿಂದ ಆಕಾಶ ಶುದ್ಧವಾಗಿತ್ತಿಹುದು. ಗಂಧವ ಸಮರ್ಪಿಸುವುದರಿಂದ ಚಂದ್ರನು ಶುದ್ಧವಾಗುತ್ತಿಹನು ಕರ್ಪೂರ ದೀಪದಿಂದೆ ಬೆಳದಿಂಗಳು ಶುದ್ಧವಾಗುತ್ತಿಹುದಯ್ಯ. ಮಂಗಳವಾದ ಅಕ್ಷತೆಯಿಂದ ನಕ್ಷತ್ರಗಳು ಶುದ್ಧವಾಗುತ್ತಿಹವು. ಪುಷ್ಪಂಗಳ ಪೂಜೆಯಿಂದ ಸೂರ್ಯನು ಶುದ್ಧವಾಗುತ್ತಿಹನು. ತುಪ್ಪದ ದೀಪದಿಂದ ಬಿಸಿಲು ಶುದ್ಧವಾಗುತ್ತಿಹುದು. ಹಿಂದೆ ಮುಂದೆ ಇಕ್ಕೆಲದಲ್ಲಿಯು ದೀಪವ ತಿರುಹುವುದರಿಂದ ನೆಳಲು ಶುದ್ಧವಹುದಯ್ಯ. ಪೂರ್ವದಲ್ಲಿ ಹೇಳಿದ ಆಯಾಯಂಶಗಳಲ್ಲಿ ಹುಟ್ಟಿದವರಿಂದ ಶೀತೋಷ್ಣ ಮೊದಲಾದ ಶುದ್ಧಿಯಾಗುತ್ತಮಿಹವಯ್ಯ. ನೈವೇದ್ಯ ರೂಪದಿಂದ ಆತ್ಮನು ಶುದ್ಧವಾಗುತ್ತಿಹನು. ತಾಂಬೂಲಾರ್ಪಣದಿಂದ ಗುಣತ್ರಯಂಗಳು ನಾಶವಾಗುವವು. ವಸ್ತ್ರವ ಹೊದಿಸುವುದರಿಂದ ಹತ್ತು ದಿಕ್ಕುಗಳು ಶುದ್ಧವಾಗುವವು. ಅರ್ಪಣವನಾಪೇಕ್ಷಿಸುವ ಪೂಜೆಗಳಿಂದ ಶಿವನನು ಪೂಜಿಸುತ್ತ ಉತ್ಕೃಷ್ಟವಾದ ದ್ರವ್ಯ ಶುದ್ಧಿಯನ್ನು ಪಡೆದು ಪ್ರಸಾದ ಸುಖವನು ಅನುಭವಿಸುತ್ತಿಹುದಯ್ಯ ಶಾಂತವೀರೇಶ್ವರಾ