Index   ವಚನ - 372    Search  
 
ಕ್ಷೀರಾದಿಂದಲಾದ ತುಪ್ಪ ಕ್ಷೀರವಾದೀತೇನಯ್ಯ ಸ್ವಾತಿಲಿಂದಾದ ಮುತ್ತು ಮರಳಿ ಉದಕವಾದೀತೆ? ಸ್ಥೂಲಸೂಕ್ಷ್ಮ ಕಾರಣ ತನುಗಳಲ್ಲಿ ಉಮಾಕ್ಷರತ್ರಯ ಲಿಂಗತ್ರಯ ಸಂಬಂಧವಾದ ಬಳಿಕ ಲಿಂಗವೆ ಆಗುವನಲ್ಲದೆ ಪುನರ್ಜನ್ಮವಿಲ್ಲವಯ್ಯ. ಅದು ಹೇಂಗೆಂದೂಡ, ಅಗ್ನಿಯಿಂದ ದಹನವಾದ ಘಟವು ಹೇಂಗೆ ಕ್ರೀಯಳಿದು ಮಣ್ಣಾಗದು ಹಾಂಗೆ ಶಿವೋಪದೇಶಾಗ್ನಿಯಿಂದ ದಹನವಾಗಿ ಲಿಂಗಮಂತ್ರ ಶರೀರಿಯಾದ ಶರಣನು ಮರಳಿ ಮನುಷ್ಯನಾಗನಯ್ಯ ಶಾಂತವೀರೇಶ್ವರಾ ಸೂತ್ರ : ಈ ಪ್ರಕಾರದಿಂದ ಪೂರ್ವಾಶ್ರಯಮಂ ತಿರಸ್ಕಾರಮಂ ಮಾಡಿದ ಮಾಹೇಶ್ವರನು ಲಿಂಗವನು ತಿಳಿದು ಆ ಲಿಂಗ ಸುಖವನು ಬೇರೆ ವಾಕ್ಕಿನಿಂದ ನುಡಿದರೆ ನಿರಸಮಂ ಮಾಡಲು ಮುಂದೆ ‘ವಾಗದ್ವೈತ ನಿರಸನ ಸ್ಥಲ’ ವಾದುದೆಂತನೆ.