Index   ವಚನ - 380    Search  
 
ಆಹ್ವಾನಿಸಿ ವಿಸರ್ಜಿಸಿದರೆ ಶೈವನಲ್ಲದೆ ವೀರಮಾಹೇಶ್ವರನಲ್ಲವಯ್ಯ! ಶಿವಶರಣರಿಬ್ಬರಿಗೂ ಭೇದ ಉಂಟಾಗದೆ ಆಹ್ವಾನ ವಿಸರ್ಜನ ಉಂಟು, ಅಲ್ಲದಿದ್ದರೆ ಇಲ್ಲವಯ್ಯ. ಮೃತ್ತಿಕೆ ಒಂದೆ ಅನೇಕ ಭಾಂಡರೂಪವಾಗಿಪ್ಪಂತೆ, ಸುವರ್ಣಮೊಂದೆ ಅನೇಕಭರಣಗಳಾಗಿಪ್ಪಂತೆ, ಒಂದೆ ಬ್ರಹ್ಮವೆ ಅಂಗತ್ರಯದಲ್ಲಿ ಲಿಂಗತ್ರಯವಾಗಿ ಷಡಿಂದ್ರಿಯ ಷಡ್ಭೂತ ಷಟ್ಚಕ್ರಂಗಳಲ್ಲಿ ಷಡ್ಲಿಂಗವಾಗಿ ಬ್ರಹ್ಮರಂಧ್ರ ಶಿಖಾ ಪಶ್ಚಿಮತ್ರಯದಲ್ಲಿ ನಿಃಕಲಶೂನ್ಯ ನಿರಂಜನವೆಂಬ ತ್ರಿವಿಧ ಲಿಂಗಾವಾಗಿಪ್ಪುದಯ್ಯ. ಅಂಗ ಹಸ್ತ ಶಕ್ತಿ ಭಕ್ತಿ ಲಿಂಗ ಮುಖ ಅರ್ಪಿತ ಪ್ರಸಾದವೆಂಬ ಅಷ್ಟವಿಧ ಸಕೀಲ ರೂಪದಿಂದ ಶರಣರ ಸರ್ವಾಂಗದಲ್ಲಿ ಪರಿಪೂರ್ಣವಾಗಿ ಎಂದಿನಂತೆ ತಾನೊಂದೆಯಾಗಿಪ್ಪುದಯ್ಯ ಶಾಂತವೀರೇಶ್ವರಾ ಸೂತ್ರ: ಈ ಪ್ರಕಾರದಿಂದ ಆಹ್ವಾನ ವಿಸರ್ಜನಮೆಂಬುಭಯವನು ನಿವೃತ್ತಿ ಮಾಡಿದ ಮಾಹೇಶ್ವರನು ಅಷ್ಟತನುವಿಂದಾದ ಸಕಲ ಪ್ರಪಂಚುವನು ಮಿಥ್ಯ ಎಂದರಿದು ಅಷ್ಟತನುಗಳಾದಿಯನು ನಿರಸನಮಂ ಮಾಡುತ್ತಿರಲು ಮುಂದೆ ‘ಅಷ್ಟತನುಮೂರ್ತಿ ನಿರಸನಸ್ಥಲ’ವಾದುದು.