Index   ವಚನ - 496    Search  
 
ಮತ್ತಮಾದಿಳೆಯೊಳಿಷ್ಟಲಿಂಗ ಅರ್ಚನೆ ಎಂತೆಂದೊಡೆ, ಹಸ್ತಕ್ಕೆ ನೀಡುವ ಉದಕವು ಪಾದಕ್ಕೆ ಕೊಡುವ ಉದಕವು ಹಾಂಗೆಯೆ ಮುಖ ಮಜ್ಜನಕ್ಕೆ ಕೊಡುವ ಉದಕವು ಪಂಚಾಮೃತಾದಿ ಸ್ನಾವನು ನೈವೇದ್ಯವು ಕನ್ನಡಿಯು ಧೂಪವ ದೀಪ ಚಾಮರವು ಸತ್ತಿಗೆಯು ಗೀತವು ವೀಣಾದಿ ವಾದ್ಯವು ನಾಟ್ಯವು ನಮಸ್ಕಾರವು ಶಿವಮಂತ್ರವು ಪ್ರದಕ್ಷಿಣವು ಇಂತಿವು ಷೋಡಶೋಪಚಾರವು. ಲಿಂಗದಲ್ಲಿ ವಿಭೂತಿಯು ತಳಿವುದು, ಸ್ನಾನವ ಮಾಡುವುದು. ಅಗ್ನಿ ಸೇವೆಯ ಮಾಡುವುದು, ತದನಂತರದಲ್ಲಿ ಧೂಪವನೆತ್ತುವುದು. ಧೂಪದ ಹೊಗೆಯಲ್ಲಿ ಮುಳುಗಿಸುವುದು ತದನಂತರದಲ್ಲಿ ಗಂಧವ ಸಮರ್ಪಿಸುವುದು, ಅಕ್ಷತೆಯ ಸಮರ್ಪಿಸುವುದು ಪುಷ್ಟವ ಸಮರ್ಪಿಸುವುದು, ದೀಪವ ಬೆಳಗುವದು, ನೈವೇದ್ಯ ಸಮರ್ಪಿಸುವುದು, ತಾಂಬೂಲ ಸಮರ್ಪಿಸುವುದು, ವಸ್ತ್ರ ಹೊದಿಸುವುದು ಈ ಪ್ರಕಾರದಲ್ಲ ಶಿವಲಿಂಗಾರ್ಚನೆಯು ಹನ್ನೆರಡು ಪ್ರಕಾರವೆಂದು ಹೇಳುವರು ಶಾಂತವೀರೇಶ್ವರಾ