ಜೀವೇಶ್ವರರಿಗಾಶ್ರಯವಾದ ಸೂಕ್ಷ್ಮ ದೇಹ ಮಧ್ಯದಲ್ಲಿ
ಷಟ್ಚಕ್ರಂಗಳಲ್ಲಿ ಹುಟ್ಟಿದ ಷಟ್ಕಮಲಂಗಳನು
ಅಧಾರ ತೊಡಗಿ ಆಜ್ಞಾಚಕ್ರವೆ ಕಡೆಯಾದ
ಬ್ರಹ್ಮಾಂಡಾದಿಗಳೆ ಸ್ಥಾನಂಗಳಾಗಿ
ಗುರೂಪದೇಶದಿಂದ ಭಾವಿಸುವುದು.
ಆಜ್ಞಾಚಕ್ರದ ಊರ್ಧ್ವ ಭಾಗವಾದ ಬ್ರಹ್ಮರಂಧ್ರದಲ್ಲಿ
ಸಹಸ್ರ ದಳ ಕಮಲವನು ಭಾವಿಸುವುದು.
ಆ ಸಹಸ್ರ ದಳ ಕಮಲದಲ್ಲಿ
ನಿರ್ಮಲವಾದ ಚಂದ್ರಮಂಡಲವನು ಧ್ಯಾನಿಸುವುದು.
ಆ ಚಂದ್ರಮಂಡಲದ ಮಧ್ಯದಲ್ಲಿ
ವಾಲಾಗ್ರಮಾತ್ರದೀಪಾದಿಯಲ್ಲಿ
ಪರಮ ಸೂಕ್ಷ್ಮ ರಂಧ್ರವದು ಕೈಲಾಸ ಸ್ಥಾನವಾಗಿ ಅರಿದು
ಆ ಕೈಲಾಸದಲ್ಲಿರುತ್ತಿದ್ದ ಪರಮೇಶ್ವರನು ಸಮಸ್ತ ಕಾರಣಂಗಳಿಗೆ
ಕಾರಣನೆಂದು ಧ್ಯಾನಿಸುವುದಯ್ಯ
ಶಾಂತವೀರೇಶ್ವರಾ