ಬಳಿಕ ಅಧಾರ ಸ್ವಾಧಿಷ್ಠಾನದ ಪೃಥ್ವಿ ಜಲ ಸಂಘಟ್ಟನದಿಂದಲಾದ
ಪಂಕದಲ್ಲಿ ಮಣಿಪೂರಕ ರೂಪವಾದ ನಾಭಿ ಕಂದದಲ್ಲಿ ಹುಟ್ಟಿ
ಆ ಕಂದದಿಂದ ಹುಟ್ಟಿದ ಅನಾಹತ ರೂಪವಾದ
ಹೃದಯ ಕಮಲದ ದ್ವಾದಶ
ದಳದಲ್ಲಿ ದ್ವಾದಶ ಕಲಾಯುಕ್ತವಾದ
ಸೂರ್ಯಮಂಡಲವಿಹುದು.
ಅದರ ಮೇಲೆ ಷೋಡಶ ದಳದೊಡನೆ ಕೂಡಿದ
ವಿಶುದ್ಧಿ ಕಮಲದಲ್ಲಿ ಷೋಡಶ ಕಲೆಯುಳ್ಳ
ಚಂದ್ರಮಂಡಲವಿಹುದು. ಅದರ ಮೇಲೆ
ದ್ವಿದಳವಾದ ಆಜ್ಞಾ ಕಮಲದಲ್ಲಿ
ದ್ವಿ ಶಿರಸ್ಸು ದಶಕಲೆಗಳುಳ್ಳ ವಹ್ನಿಮಂಡಲವವಿಹುದು.
ಅದರ ಮೇಲೆ ಸಹಸ್ರ ದಳ ಕಮಲದ ಬ್ರಹ್ಮರಂಧ್ರದಲ್ಲಿ
ಅಷ್ಟತ್ರಿಂಶತ್ಕಲೆಯೊಡನೆ ಕೂಡಿದ ಕುಂಡ ಮಂಡಲದ ಮೇಲೆ
ಲಿಂಗಾಂಗ ಸಮರಸ ರೂಪವಾದ
ಶಿವಯೋಗ ಸಮಾಧಿಯುಳ್ಳ ಪ್ರಾಣಲಿಂಗಿಗೆ ಶಿವಾನಂದಮಲ್ಲದೆ
ಮಾಯಜನ್ಯವಾದ ಸುಖವಿಲ್ಲ ಎಂದು ಪೇಳುವರಯ್ಯ
ಶಾಂತವೀರೇಶ್ವರಾ