Index   ವಚನ - 526    Search  
 
‘ಎಲೆ ಪಾರ್ವತಿದೇವಿ, ಮರಳಿ ಜಂಗಮ ದೇವರುಗಳ ಪಾದೋದಕದಲ್ಲಿ ಕರಚರಣಾದ್ಯವಯವಂಗಳನು ಪ್ರೋಕ್ಷಿಸಿ ಪರಮೇಶ್ವರನ ಧ್ಯಾನವ ಮಾಡಲಾಗಿ ಬಾಹ್ಯ ಕ್ರಿಯೆಯಿಂದ ಸಂಸ್ಕರಿಸಿ, ಅನಂತರದಲ್ಲಿ ಪಂಚಬ್ರಹ್ಮ ಮಂತ್ರ ಮೊದಲಾದ ಮಂತ್ರಗಳಿಂದ ಜಂಗಮ ದೇವರುಗಳ ಪಾದ ಪ್ರಕ್ಷಾಲನೋದಕದಲ್ಲಿ ಸ್ನಾನವ ಮಾಡಿಸಿ, ಶುಭ್ರವಾದ ಹೊದಿಕೆಗಳಿಂದ ಅಲಂಕರಿಸಿ ಚರ ಪಾದಾರ್ಪಿತದಿಂದ ಶುದ್ಧವಾದ ಪುಷ್ಪ ಮಾಲೆಗಳಿಂದ ಅಲಂಕರಿಸಿ ಮರಳಿ ವಿಭೂತಿ ರುದ್ರಾಕ್ಷ ಧಾರಣವ ಮಾಡಿ ಬಳಿಕ ಧೂಪ ದೀಪಗಳ ಉಪಚಾರವನು ಮಾಡಿ ವಿಭೂತಿಯಿಂದ ಆ ದೇಹವನು ಉದ್ಧೂಳಿಸುವುದು. ಸ್ನೇಹಿತರು ಬಂಧುಗಳಾದವರು ಜಂಗಮ ಪಾದೋದಕದಿಂದ ಮುಖವನು ತೊಳೆದು ಚರಪದೋದಕ ಮೊದಲಾದ ಕ್ರಿಯೆಗಳನು ಸಮಾಧಿಯಲ್ಲಿ ಮಾಡುವುದಯ್ಯ ಶಾಂತವೀರೇಶ್ವರಾ