Index   ವಚನ - 545    Search  
 
ಶ್ರೋತ್ರದಲ್ಲಿ ಗುರುವಚನ, ಶಿವಮಂತ್ರ, ಶಿವವಚನ, ಶಿವಪುರಾಣವನಲ್ಲದೆ ಕೇಳದಿಹ, ತ್ವಕ್ಕಿನಲ್ಲಿ ಶಿವಲಿಂಗವನಲ್ಲದೆ ಧರಿಸದಿಹ, ನೇತ್ರದಲ್ಲಿ ಶಿವಲಿಂಗವನಲ್ಲದನ್ಯವ ನೋಡದಿಹ, ಜಹ್ವೆಯಲ್ಲಿ ಶಿವಸ್ತೋತ್ರ ಶಿವಮಂತ್ರವನಲ್ಲದೆ ಉಚ್ಚರಿಸದಿಹ, ಘ್ರಾಣದಲ್ಲಿ ಶಿವಪ್ರಸಾದವನಲ್ಲದೆ ವಾಸಿಸದಿಹ, ಹೃದಯದಲ್ಲಿ ಶಿವ ಸ್ಮರಣೆಯನಲ್ಲದೆ ಮಾಡದಿಹ, ಶಬ್ದ ಗುರು ಸ್ಪರ್ಶ ಲಿಂಗ, ರೂಪ ಶಿವಲಾಂಛನ, ರಸ ಶಿವಪ್ರಸಾದ, ಗಂಧ ಶಿವಾನುಭವ, ತೃಪ್ತಿಯೇ ಚಿದಾನಂದ, ‘ಶಿವ’ ಎಂಬುದೆ ವಚನ ಶಿವಾಚಾರ, ಸದ್ಭಕ್ತಿವಿಡಿದಿಹುದೆ ಆದಾನ ದುರಾಚಾರವ ಬಿಡುವುದೆ ವಿಧಾನ ಶ್ರೀಗುರು ಮಾರ್ಗದಲ್ಲಿ ಆಚರಿಸುವುದೀಗ ಗಮನ. ಅನೀತಿಯ ಬಿಡುವುದೆ ಆಗಮ. ಅಧೋಗತಿಗಿಳಿವ ಮಾರ್ಗವ ಬಿಡುವುದೆ ವಿಸರ್ಜನ. ಶಿವಶರಣರ ಸತ್ಸಂಗದಲ್ಲಿ ಆನಂದಿಸುವದೆ ಆನಂದ. ವಿರಕ್ತಿಯಿಂದ ಸಂಪ್ರತಿಯ ಬಿಡುವುದೆ ಅನಾನಂದ ಇಂತಿವರಲ್ಲಿ ಲಿಂಗವೆ ಪರಿಪೂರ್ಣವಾಗಿಪ್ಪುದಯ್ಯ ಶಾಂತವೀರೇಶ್ವರಾ