Index   ವಚನ - 631    Search  
 
ಮತ್ತಂ, ಗುರು ಹಿರಿಯರಾರೆಂದೊಡೆ, ಬಂದ ಬರವ ನಿಂದ ನಿಲುಕಡೆಯಲ್ಲಿ ಗ್ರಾಮಮಂ ಬಿಡುವನೆಂಬ ಅಹಂಕಾರಿಯಲ್ಲದೆ ಚುಚ್ಚಕನಾಗದೆ ಬಣ್ಣಕಾದಡೆ ಮಹಾಮೂರ್ತಿಯಾಗಿ ಯೋಗ್ಯನಾಗಿ ತನ್ನ ತಾ ತಿಳಿದು ನೋಡುವಾತ ಈಶ್ವರ ಲಾಂಛನ ಉಂಟಾಗಿರೆ, ಆತನೆ ಜಂಗಮದೇವರು. ಪರಮೇಶ್ವರ ಸ್ವರೂಪನಾಗಿಹನು, ಆತ ಪಾದಪೂಜೆಗೆ ಕರ್ತನು. ಆತನಲ್ಲಿ ಆಸೆ ಇಲ್ಲ. ಆತನ ಪಾದ ಪೂಜೆಯ ಮಾಡಿ ಪಾದತೀರ್ಥಮಂ ಪಡೆದು, ಗ್ರಂಥ: ‘ಲಿಂಗ ಜಂಗಮ ಪಾದಾಬ್ಜ ಸಂಭೂತಾಯ ಶಿವಾತ್ಮನೆ, ಸದಾನಂದ ಸ್ವರೂಪಾಯ ಪಾದ ತೀರ್ಥಯತೆ ನಮಃ’ ಎಂದಡ್ಡ ಬಿದ್ದು, ಇಂತಪ್ಪ ಪಾದತೀರ್ಥ ಪ್ರಸಾದವ ಸೇವಿಪ ಭಕ್ತರ್ಗೆ ಜನನ ಮರಣವಿಲ್ಲ. ಭವಕ್ಕೆ ಬಾರನು. ಅಂಥಾತ ಗಣ ಸಂತತಿಯಾಗಿಹನು ಕೇಳಿರಯ್ಯ ಜಂಗಮದೇವರೆಂದು ಕರೆಸಿಕೊಂಬುವರೆಲ್ಲರು ನೀವು ನಿಮ್ಮ ಬೆಳಗೆ ಬಿರುವಿರಿ, ಬೀರಿಕೊಳ್ಳಲಾಗದು. ಮುಂದೆ ಕಲಿಯುಗದಲ್ಲಿ ದುರ್ವರ್ತನೆಗಳಾಗಿ ಈ ವಚನವ ನೋಡಿ ಜರೆದಾರು,ಹುಸಿಯೆಂದು ನುಡಿದಾರು. ಮೊದಲೆ ಹೇಳಿದವರೆಲ್ಲರು ಜಂಗಮ ದೇವರಲ್ಲವೆ? ದೀಕ್ಷೆ ಇಲ್ಲವೆಂದರೇನು? ಅಣುರೇಣು ತೃಣ ಕಾಷ್ಠ ಜಂಘೆಯನಿಕ್ಕಿ ನಡೆದವರೆಲ್ಲರು ಜಂಗಮರು. ಈಶ್ವರನೆಲ್ಲರೊಳಗುಂಟು, ಜಂಗಮ ದೀಕ್ಷಿತವಾಗಿ ಭಿಕ್ಷವಂ ತಂದು ಹಸ್ತ ಸ್ಪರ್ಶನದಿಂದ ಭಕ್ತಿಯುಳ್ಳ ಅಂತಪ್ಪ ಮೂರ್ತಿಯ ಕರೆತಂದು ಪಾದಪೂಜೆಯಂ ಮಾಡಿ ತೀರ್ಥ ಪ್ರಸಾದವಂ ಸಲಿಸಿ ಕಾಯಶುದ್ಧವಾದಾತನೆ ಜಂಗಮ ಉಳಿದವರಲ್ಲಿ ಕೊಳಲಾಗದು. ಹಸ್ತ ಬೆರಳು ಹಿರಿದು ಕಿರಿದುಂಟಾಗಿರುವಂತೆ, ದೀಕ್ಷೆಯೊಳು ಹಿರಿದು ಕಿರಿದುಂಟು. ಮಹಾಮೂರ್ತಿ ಆಸೆ ಇಲ್ಲದಂತಹ ಷಟ್ಸ್ಥಲಜ್ಞಾನಿಯಾಗಿ ಜಂಗಮಕ್ಕೆ ಯೋಗ್ಯವೆನಿಸಿದಾತನು ಪಾದಪೂಜೆಗೆ ಆತನೆ ಕರ್ತ. ಇಷ್ಟು ತಿಳಿದಾತನೆ ಯೋಗ್ಯನು. ಕಂಡ ಹಾಂಗೆ ಕೊಂಡಾಡುವ ದಿಂಡೆಯರೆಲ್ಲ ಕೇಳಿ, ಮಂದಣ ಕಲಿಯುಗವಾವ ಕಾಲವು ಶಾಸನವ ಮಾಡಿದ ಕಾರಣ ಇಂತೆಂದು ಚನ್ನಬಸವೇಶ್ವರದೇವರು ನಿರೂಪಿಸಿರುವರಯ್ಯ ಶಾಂತವೀರೇಶ್ವರಾ