Index   ವಚನ - 644    Search  
 
ಶ್ರೀಗುರು ಪಂಚಬ್ರಹ್ಮ ಪರಿಪೂರ್ಣ. ತತ್ತ್ವ ನಾಲ್ಕು ದಿಕ್ಕು ನಾಲ್ಕು ಕಳಸ ನಾಲ್ಕು ಗಂಗೆ ನಾಲ್ಕು ಪ್ರವರ ನಾಲ್ಕು ಗೋತ್ರ ನಾಲ್ಕು ಆಶ್ರಮಮುಖ ನಾಲ್ಕು ವರ್ಣ ನಾಲ್ಕು ಶಿಖಿ ನಾಲ್ಕು ಪರಿಯಾಯ ನಾಲ್ಕು ವೃಕ್ಷ ನಾಲ್ಕು ಆಚಾರ್ಯ ನಾಲ್ವರು ಆಚರಣ ನಾಲ್ಕು ವೇದ ನಾಲ್ಕು ಪ್ರಾಣಲಿಂಗ ನಾಲ್ಕು ವಾಹನ ನಾಲ್ಕು ದಂಡ ನಾಲ್ಕು ಕಪ್ಪರ ನಾಲ್ಕು ಮುದ್ರೆ ನಾಲ್ಕು ಗದ್ದುಗೆ ನಾಲ್ಕು ಕರಣ ನಾಲ್ಕು ಇಂತಿವರ ಪರಿಯಾಯವೆಂತೆಂದೊಡೆ: ಕೃತಯುಗದಲ್ಲಿ ಶ್ರೀಗುರು ಪರಮೇಶ್ವರನು ಲೋಕನುಗ್ರಹ ಕಾರಣವಾಗಿ ಲೋಕಂಗಳಿಗೆ ಉಪದೇಶಗೆಯ್ಯಲೆಂದು ನಾಲ್ವರು ಆಚಾರ್ಯರ ನಿರ್ಮಿಸಿದರು. ಆವರಾರೆಂದಡೆ: ಸದಾಶಿವ ಈಶ್ವರ ಮಹೇಶ್ವರ ರುದ್ರರಂಬ ಗಣೇಶ್ವರರುದ್ಭವಿಸುವರು. ಅವರು ಶಿವನಿಂದ ದೀಕ್ಷೆಯಂ ಪಡೆದು ಶಿವಲಿಂಗವಂ ಧರಿಸೊಕೊಂಡು ಬ್ರಹ್ಮ ವಿಷ್ಣು ಪಾರ್ವತಿ ಇಂದ್ರ ಮೊದಲಾದವರ್ಗ ಉಪದೇಶವಂಗೈಯ್ದರು. ತ್ರೇತಾಯುಗದಲ್ಲಿ ಆ ಗಣೇಶ್ವರರ ಸಂಪ್ರಾದಯದಲ್ಲಿ ಷಡಕ್ಷರ ಪಂಚಾಕ್ಷರ ತ್ರಿಯಕ್ಷರ ಏಕಾಕ್ಷರರೆಂಬ ಗಣೇಶ್ವರರುದ್ಭವಿಸಿದರು.ದ್ವಾಪರದಲ್ಲಿ ಆ ಗಣೇಶ್ವರರ ಸಂಪ್ರದಾಯದಲ್ಲಿ ರೇಣುಕ ದಾರುಕ ಶಂಖುಕರ್ಣ, ಗೋಕರ್ಣರೆಂಬ ಗಣೇಶ್ವರರುದ್ಭವಿಸಿದರು. ಕಲಿಯುದಲ್ಲಿ ಆ ಗಣೇಶ್ವರರ ಸಂಪ್ರಾದಾಯದಲ್ಲಿ ರೇವಣಸಿದ್ಧಯ್ಯದೇವರು ಮುರುಳಸಿದ್ಧಯ್ಯದೇವರು ಏಕೋರಾಮಯ್ಯದೇವರು ಪಂಡಿತಾರಾಧ್ಯರೆಂಬ ಗಣೇಶ್ವರರುದ್ಭವಿಸಿದರು. ಈ ನಾಲ್ವರು ಲೋಕಂಗಳಗೆ ಉಪದೇಶಂಗೆಯ್ಯುತ್ತಿಹರ. ಅದೆಂತೆಂದೊಡೆ: ಮಧ್ಯದಲಿ ಹೇಮದಳ ಕಳಸ ಜಂಬೂ ನದಿ ಗಂಗೆ ಮೇರು ಪರ್ವತ ಅಲ್ಲಿಯ ಮುಖ ಅದು ಪರಾತ್ಪರತ್ವ ಅದು ಸಂಪೂರ್ಣ. ಅದು ಬೀಜವಿಲ್ಲದ ವೃಕ್ಷ. ಅದು ಗುರು ಕಳಶ. ಸುಮನ ಧೇನು ಆಕಾಶ ಭೂತ ಪ್ರಾಣವಾಯು ಪರಮಾತ್ಮ ಸ್ವರೂಪ ಪರಶಕ್ತಿ ಶಿವ ಸಾದಾಖ್ಯ ಯಕಾರ ಬೀಜಾಕ್ಷರ. ಅಲ್ಲಿಯ ಆಚಾರ್ಯರು ವಿಶ್ವೇಶ್ವರದಾತರು ಶೂನ್ಯವಾಹನ ಉನ್ಮನಿಯ ಧ್ವಜ ಜಟಾ ಮಕುಟ ತತ್ತ್ವದಂಡ ಪ್ರಕಾಶ ಕರ್ತಾರ ಅಕಲ್ಪಿತ ಭಿಕ್ಷ ನಭೋ ಮುದ್ರೆ ಶಾಂತಿ ಭಸ್ಮೋದ್ಧೂಳನ ಅಖಂಡ ಮಂಡಲಾಕಾರ ಮೇರುವೆ ಕಂತೆ ಸಕಲ ಮಣಿಗಳೆ ಭೂಷಣ ದಿಗ್ವಸನ ಸಾಮವೇದ ಅವರ ಪ್ರಾಣಲಿಂಗ ಸಚ್ಛಿದಾನಂದ ಸ್ವರೂಪ ಕೋಟಿ ಚಂದ್ರಸೂರ್ಯ ಪ್ರಕಾಶ, ನಿರ್ಭಾವ ಸಜ್ಜೆಯೊಳು ಉತ್ತಮಾಂಗದಲ್ಲಿ ಧರಿಸಿ ಸಹಸ್ರದಳ ಕಮಲಂಗಳಿಂದ ಆರಾಧಿಸುತ್ತಂ ಚಂದ್ರಕಾಂತದ ಶಿಲಾಶೀಲ ದಳದ ವೈರಾಗ್ಯ ಪೀಠದ ಮೇಲೆ ಕುಳಿತು ಪೂಜಿಸಿ ರಾರಾಜಿಸುತ್ತಿರ್ಪರು ಇದು ಗುರುಕಳಶವಯ್ಯ ಶಾಂತವೀರೇಶ್ವರಾ