Index   ವಚನ - 675    Search  
 
ಶಿವಲಿಂಗದ ಕರ್ಮಕಾಂಡ ಪ್ರಸಿದ್ಧವಾದ ಕ್ರಿಯೆ ಸ್ವರೂಪವಾಗುಳ್ಳ ಆವುದಾನೊಂದು ಪೂಜೆಯುಂಟು, ಆ ಪೂಜೆಯು ಅಲ್ಪಜ್ಞಾನಿಗಳಿಗೆ ಸಮ್ಮತವಾಗಿ ಅರಿಯಲು ಯೋಗ್ಯವು. ಜ್ಞಾನಕಾಂಡ ಪ್ರಸಿದ್ಧವಾದ ಅಂಥ ಪೂಜೆಯು ಪರಿಪೂರ್ಣವಾದ ಶಿವಜ್ಞಾನಿಗಳಿಗೆ ಸಮ್ಮತವಯ್ಯ! ದೇಹವೆ ದೇವಾಲಯ, ಜೀವನೆ ಪ್ರಾಣಲಿಂಗವೆಂದು ಅಜ್ಞಾನವೆಂಬ ನಿರ್ಮಾಲ್ಯವನು ತ್ಯಜಿಸಿ, ಸೋಹಂ ಭಾವದಿಂದ ಪೂಜಿಸುವುದಯ್ಯ ಶಾಂತವೀರೇಶ್ವರಾ ಸೂತ್ರ: ಈ ಪ್ರಕಾರದಿಂದ ಭಾವದಲ್ಲಿ ಪೂರ್ಣವಾದ ಸದ್ಭಾವ ಸ್ವರೂಪ ಉಳ್ಳ ಲಿಂಗವು ಭಕ್ತನಂಗದಲ್ಲಿ ನಿಂದು ಮಹಾಜ್ಞಾನ ಸ್ವರೂಪವನು ಪ್ರಾಪ್ತಿಸಿದ ಭೇದವೆಂತಿದ್ದಿತ್ತೆಂದೊಡೆ ಮುಂದೆ ‘ಜ್ಞಾನಲಿಂಗಸ್ಥಲ’ವಾದುದು.