Index   ವಚನ - 688    Search  
 
ಶಿವಯೋಗಿಯಾದಾತನು ಸರ್ವ ಸಮತ್ವವೆಂಬ ಕಂಥೆಯನು ಸುಮನವೆಂಬ ಕಿರೀಟವನು ಸೈರಣೆ ಎಂಬ ಭಸ್ಮ ಧಾರಣವನು ಸರ್ವ ಪ್ರಾಣಿಗಳಲ್ಲಿಯು ದಯವೆಂಬ ಕಮಂಡಲವನು ಮನೋಹರವಪ್ಪಂಥ ಜ್ಞಾನವೆಂಬ ದಂಡವನು ವೈರಾಗ್ಯವೆಂಬ ಭಿಕ್ಷಾ ಪಾತ್ರೆಯನು ಧರಿಸಿ, ಶ್ರೀವೀರಶೈವಾಗಮೊಕ್ತವಪ್ಪ ಪ್ರಾಣಲಿಂಗ ಶಿವಾಚಾರದೊಡನೆ ಕೂಡಿದಂಥ, ಕಪಟವಿಲ್ಲದೆ, ಅನ್ಯಥಾ ಭಾವ ಭೇದವಿಲ್ಲದೆ, ಬಾಹ್ಯಭ್ಯಾಂತರಗಳಲ್ಲಿ ವಿಶುದ್ಧ ಚಿತ್ತರಪ್ಪಂಥ ಪ್ರಾಣಲಿಂಗ ಸಂಬಂಧಿಗಳಪ್ಪಂಥ ಮನುಷ್ಯರುಗಳನು ಶಿವಭಕ್ತಿ ಭಿಕ್ಷವನು ಭೇಡುವುದಯ್ಯ ಶಾಂತವೀರೇಶ್ವರಾ