Index   ವಚನ - 107    Search  
 
ಮನಮುಟ್ಟದ ವ್ರತ, ತನುಮುಟ್ಟದ ಸುಖ, ಬೇರುಮುಟ್ಟದ ಸಾರ ಅದಾರಿಗೆ ಯೋಗ್ಯ? ಮನ ವಚನ ಕಾಯ ತ್ರಿಕರಣ ಏಕವಾಗಿ ಅಂಗಕ್ಕೆ ಆಚಾರ, ಆಚಾರಕ್ಕೆ ಅರಿವು, ಅರಿವಿಂಗೆ ಕುರುಹು, ಕುರುಹಿನಲ್ಲಿ ನೇಮಕ್ಕೊಡಲಾಗಿ, ಭಾವಕ್ಕೆ ರೂಪಾಗಿ, ಬಾವಿಯ ನೀರ ಕುಂಭ ತಂದುಕೊಡುವಂತೆ, ಮಹಾಜ್ಞಾನ ಸುಖಜಲವ ಜ್ಞಾತೃವೆಂಬ ಕಣ್ಣಿಗೆ ಜ್ಞೇಯವೆಂಬ ಕುಂಭದಲ್ಲಿ ಭಾವವೆಂಬ ಜಲ ಬಂದಿತ್ತು. ಆ ಸುಜಲದಿಂದ ಅಂಗವೆಂಬ ಲಿಂಗಕ್ಕೆ ಮಜ್ಜನಕ್ಕೆರೆದೆ ಪ್ರಾಣಲಿಂಗಕ್ಕೆ ಓಗರವನಟ್ಟೆ, ಮಹಾಘನವೆಂಬ ತೃಪ್ತಿಲಿಂಗ, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ನೇಮ ಸಂದಿತ್ತು.