Index   ವಚನ - 108    Search  
 
ಮರ್ಕಟ, ಕುಕ್ಕುಟ, ಮಾರ್ಜಾಲ, ಶುನಕ, ಶೂಕರ, ವಿಹಂಗ ಇಂತಿವು ಮೊದಲಾದ ಅನ್ಯಜೀವಪ್ರಾಣಮಂ ಸಲಹದೆ ಸಲಹುವರ ಮನೆಯಲ್ಲಿ ತಾನೊಪ್ಪಿಕೊಳ್ಳದೆ, ಪರಪಾಕ ರಸದ್ರವ್ಯವ ಮುಟ್ಟದೆ, ಬಾಹ್ಯಜಲವಂ ಬಿಟ್ಟು ಪಾದತೀರ್ಥ ಪ್ರಸಾದವಿಲ್ಲದೆ ತಾ ನೇಮವನೊಲ್ಲದೆ, ಬೇರೊಂದು ಭಿನ್ನದೈವವೆಂದು ಪ್ರಮಾಣಿಸದೆ, ಪಾದತೀರ್ಥ ಪ್ರಸಾದವಿಲ್ಲದವರ ಮನೆಯಲ್ಲಿ ಒಲ್ಲದೆ, ತನ್ನನುವಿಂಗೆ ಅನುವಾದುದನರಿದು ಸಂಬಂಧಿಸಿ ಇಪ್ಪುದು ನೇಮ ಕ್ರೀ. ಇಂತೀ ಭಾವಶುದ್ಧವಾಗಿ ನಡೆವುದು, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ ಬಾಹ್ಯನೇಮ.