Index   ವಚನ - 79    Search  
 
ಮತ್ತಮಾ ಸಿಂಹಾಸನಾಗ್ರದಲ್ಲಿ ಶಿವಲಿಂಗ ವಾಹನ ಸ್ಥಾಪನ ಸನ್ನಿಧಾನ ಸಂರೋಧನ ಸಮ್ಮುಖೀಕರಣಮೆಂಬ ಕ್ತಿಯೆಗಳಂ ಮಾಡಿ ಬಳಿಕ ಪೂಜಾ ಪ್ರಾರಂಭದಿಂ ತೊಡಗಿ, ಪೂಜಾ ಸಮಾಪ್ತಿ ಪರಿಯಂತರಂ ಕ್ಷಾನನಪಾತ್ರ ಜಲಮಂ ಮರಳಿ ಮರಳಿ ಮುಷ್ಟಿ ಮುಷ್ಟಿ ಸಕಲ ಕ್ತಿಯೆಗಳನೀಶ್ವರಾರ್ಪಣಂ ಗೆಯ್ಯಬೇಕೆಂದರಿದು, ಬಳಿಕ ನದಿ ತ[ಟಾ]ಕ ಕೂಪಂಗಳಲ್ಲಿ ಸ್ವಾದುಮಿಶ್ರಮಾದುದಕ ಭೇದಂಗಳಂ ಬಿಳಿಯ ಸಾಸಿವೆ ಕುಸುಮ ದೂರ್ವೆ ಕೋಷ್ಟ ಲಾಮಂಚ ಕರ್ಪೂರವೆಂಬಾರು ಪಾದ್ಯ ದ್ರವ್ಯಂಗಳಂ ಕುಶಾಗ್ರ ತಿಲ ಬಿಳಿಯ ಸಾಸಿವೆ ಜವೆ ನೆಲ್ಲು ಕ್ಷೀರಮೆಂಬಾರು ಅರ್ಘ್ಯ ದ್ರವ್ಯಂಗಳಂ, ಮುಖಾಂಬುಜಕ್ಕೀ ಘೃತ ದಧಿ ಮಧು ಮಿಶ್ರಮಾದ ಮಧುಪರ್ಕ ದ್ರವ್ಯಂಗಳಂ, ಫಲ ಕಚೋರ ಕರ್ಪೂರ ಕೊಷ್ಟ ಕುಂಕುಮ ಯಾಲಕ್ಕಿಯೆಂಬಾರು ಆಚಮನ ದ್ರವ್ಯಂಗಳಂ, ಪಂಚಗವ್ಯ ಪಂಚಾಮೃತಂಗಳಂ, ಗೋಧೂಮ ಚೂರ್ಣ ಗಂಧಾದ್ಯುದ್ವರ್ತನ ದ್ರವ್ಯಂಗಳಂ, ಮುಂದೋಷ್ಣಾದಿ ಸ್ನಾನವಾರಿಗಳಂ ಗಂಧೋದಕ ಪುಷ್ಪೋದಕ ರತ್ನೋದಕ ಮಂತ್ರೋದಕಂಗಳಂ ಮಹಾ ಸ್ನಾನೋದಕಂಗಳು, ವಿಧಿ ನಯ ಶುಭ್ರಾದಿ ಗುಣಯುಕ್ತ ಭಸಿತಂಗಳು, ಪ[ಟ್ಟೆ] ದೇವಾಂಗ ಶುಭ್ರ ಚಿತ್ರಾದಿ ವಸ್ತ್ರಂಗಳಂ, ಸುರ್ವಣ ರಜತ ಪ[ಟ್ಟೆ] ಸೂತ್ರಾದಿ ಯಜ್ಞೋಪವೀತಂಗಳಂ, ಕಿರೀ[ಟಾ]ದ್ಯಾಭರಣಂಗಳಂ, ಚಂದನ ಅಗರು ಕಸ್ತೂರಿ ಕರ್ಪೂರ ತಮಾಲ ದಳ ಕುಂಕುಮ ಲಾಮಂಚ ಕೋಷ್ಟಂಗಳೆಂಬ ಅಷ್ಟಗಂಧಂಗಳಂ, ಜವೆ ಬಿಳಿಯ ಸಾಸಿವೆ ತಿಲ ತಂಡುಲ ಮುಕ್ತಾಫಲಾದ್ಯಕ್ಷತೆಗಳಂ, ಶಭ್ರರಕ್ತ ಕೃಷ್ಣವರ್ಣ ಕ್ರಮದಿಂ ನಂದ್ಯಾದಿ ಮರ್ತ್ತಾದಿ ಕಮಲಾದಿ ನೀಲೋತ್ಪಲಾದಿ ಸಾತ್ವಿಕ ರಾಜಸ ತಾಮಸ ಪುಷ್ಪಂಗಳಂ, ದೂರ್ವೆ ತುಲಸಿ ಬಿಲ್ವಾದಿ ಪತ್ರಜಾಲಂಗಳಂ, ಕರಿಯ[ಗ]ರು ಬಿಳಿಯಗರು ಗುಗ್ಗುಳ ಶ್ರೀಗಂಧ ಅಗರು ಬಿಲ್ವಫಲ ತುಪ್ಪ ಜೇನುತುಪ್ಪ ಸಜ್ಜರಸ ಕರ್ಪೂರವೆಂಬ ದಶಾಂಗ ಧೂಪಂಗಳಂ, ತೈಲವರ್ತಿ ಘೃತಕರ್ಪೂರವೆಂಬ ದೀಪ ಸಾಧನಂಗಳಂ, ಹರಿದ್ರಾನ್ನ ಪರಮಾನ್ನ ಮುದ್ಗಾನ್ನ ಕೃಸದಾನ್ನ ದಧ್ಯಾನ್ನ ಗುಡಾನ್ನಮೆಂಬ ಷಡ್ವಿಧಾನ್ನಾದಿ ನೈವೇದ್ಯಂಗಳಂ, ಪೂಗಪರ್ಣ ಚೂರ್ಣ ಕರ್ಪೂರಾದಿ ತಾಂಬೂಲ ದ್ರವ್ಯಂಗಳಂ, ಬೇರೆ ಬೇರೆ ಸಂಪಾದಿಸುವುದಯ್ಯ ಶಾಂತವೀರೇಶ್ವರಾ.