Index   ವಚನ - 7    Search  
 
ಮಹದಾದಿ ತತ್ವಂಗಳಿಗೂ ಪಂಚಸಾದಾಖ್ಯಂಗಳಿಗೂ ಪಂಚಕಲೆಗಳಿಗೂ ಮೂವತ್ತರು ತತ್ವಂಗಳಿಗೂ ಸಪ್ತಸಮುದ್ರಂಗಳಿಗೂ ಸಪ್ತದ್ವೀಪಂಗಳಿಗೂ ಸಪ್ತಕುಲಪರ್ವತಂಗಳಿಗೂ ಸಮಸ್ತಗ್ರಹರಾಶಿಗಳಿಗೂ ಅನಂತಕೋಟಿ ಗವಾಂ ಬ್ರಹ್ಮಾಂಡಗಳಿಗೂ ಅನಂತಕೋಟಿ ಕುಕ್ಕುಟ ಬ್ರಹ್ಮಾಂಡಗಳಿಗೂ ಅನಂತಕೋಟಿ ವಟವೃಕ್ಷ ಬ್ರಹ್ಮಾಂಡಗಳಿಗೂ ಅನಂತಕೋಟಿ ಔದುಂಬರ ಬ್ರಹ್ಮಾಂಡಗಳಿಗೂ ಇಂತಿವೆಲ್ಲಕ್ಕೂ ಆಲಯವಾಗಿರ್ದಾತನು ನೀನೆ ಅಯ್ಯಾ. ಅದೆಂತೆಂದೊಡೆ: ಆ ನಿರಾಳ ವೃಕ್ಷದ ಪಂಚಶಾಖೆಗಳೆ ಪಂಚಲಿಂಗಮೂರ್ತಿಗಳು ನೋಡಾ. ಅನಂತಕೋಟಿ ಬ್ರಹ್ಮರು, ಅನಂತಕೋಟಿ ವಿಷ್ಣುಗಳು ಅನಂತಕೋಟಿ ದೇವೇಂದ್ರರು ಎಂಬತ್ತೆಂಟುಕೋಟಿ ರಾಜಋಷಿಯರು ಎಂಬತ್ತೆಂಟುಕೋಟಿ ಬ್ರಹ್ಮಋಷಿಯರು ಎಂಬತ್ತೆಂಟುಕೋಟಿ ದೇವಋಷಿಯರು ಇವರೆಲ್ಲ ಕೋಟಲೆಗೊಳಗು. ಅಂಗಾಲ ಕಣ್ಣವರು, ಮೈಯೆಲ್ಲ ಕಣ್ಣವರು ನಂದಿವಾಹನ ರುದ್ರರು, ಗಂಗೆವಾಳುಕ ರುದ್ರರು ಇವರೆಲ್ಲರು ಬುಡಮೇಲೆ ಹೂವು ಚಿಗುರು. ಅಖಿಳ ಬ್ರಹ್ಮಾಂಡಗಳಲ್ಲಿಹ ಸಚರಾಚರಂಗಳು ಇಂತೀ ಸಚರಾಚರಗಳು, ನಿತ್ಯಾನಂದ ವೃಕ್ಷವ ಸ್ವೀಕರಿಸಲರಿಯದೆ ಮಾಯವಶವಾಗಿ ಸಾವುತ್ತ ಹುಟ್ಟುತ್ತಿಹ ಕಾರಣ ಆನಂದಮೂಲ ಗುಣ ಪಲ್ಲವ ತತ್ವಶಾಖೆ “ವೇದಾಂತ ಪುಷ್ಪ ಫಲ ಮೋಕ್ಷ ರಸಾದಿಪೂರ್ಣಂ ಚೇತೋ ವಿಹಂಗ ಶಿವ ಕಲ್ಪತರು ವಿಹಾಯ ಸಂಸಾರ ಶುಷ್ಕ ವಿಟಪಿಕಿವಿದಂ ಕರೋತಿ” ಜೀವನೆಂಬ ಪಕ್ಷಿ ಭವದ ತರುವನಾಶ್ರಯಿಸಿದ ಕಾರಣವೇನು ಹೇಳಾ ಶೂನ್ಯನಾಥಯ್ಯ.