ಶಮೆ ದಮೆ ತಿತಕ್ಷೆ ಉಪರತಿ ಶ್ರದ್ಧೆ ಸಮಾಧಿ
ಎಂಬಿವು ಆರು ತೆರ ನೋಡಾ.
ಅದೆಂತೆಂದೊಡೆ:
ಅಂತಃಕರಣ ನಿಗ್ರಹವೆ ಶಮೆ,
ಬಾಹ್ಯಕರಣ ನಿಗ್ರಹವೆ ದಮೆ,
ಕ್ರೋಧಾದಿಗಳ ಸೈರಿಸುವುದೆ ತಿತಿಕ್ಷೆ,
ಸರ್ವಕರ್ಮಪರಿತ್ಯಾಗವೆ ಉಪರತಿ,
ಸುಜ್ಞಾನಗುರುವಿನಲ್ಲಿಯ ವಿಶ್ವಾಸವೆ ಶ್ರದ್ಧೆ,
ಗುರೂಪದೇಶವ ಚಿತ್ತದಲ್ಲಿ ದೃಢವಿಡಿವುದೆ ಸಮಾಧಿ.
ಇಂತಿವು ಅಂಗದಲ್ಲಿ ಅಳವಟ್ಟ ಮಾಹೇಶ್ವರಗೇನು
ಮೈತ್ರಿ ಕರುಣ ಮುದಿತ ಉಪೇಕ್ಷ ಎಂಬ ನಾಲ್ಕು ತೆರ.
ಅದೆಂತೆಂದಡೆ:
ಸತ್ಪುರುಷರೊಡತಣ ಸ್ನೇಹವೆ
ಮೈತ್ರಿಯೆನಿಸುವುದು.
ದುಃಖಾತ್ಮರಲ್ಲಿಯ ಮರುಕವೆ
ಕರುಣವೆನಿಸುವುದು.
ಪುಣ್ಯಜೀವಗಳಲ್ಲಿಯ ಸಂತೋಷವೆ
ಮುದಿತವೆನಿಸುವುದು.
ಪಾಪಿಗಳಲ್ಲಿ ರಾಗದ್ವೇಷವಿಲ್ಲದಿಪ್ಪುದೆ
ಉಪೇಕ್ಷೆಯೆನಿಸುವುದು ನೋಡಾ.
ಇಂತಿವು ಅಂಗವಾದ ಪರಮ ಮಾಹೇಶ್ವರನು
ಬ್ರಹ್ಮಚಾರಿ ಗೃಹಸ್ಥ ವಾನಪ್ರಸ್ಥ ಸನ್ಯಾಸಿಯೆಂಬ ಚತುರಾಶ್ರಮಿಗಳಿಂದವು
ಅಂತಃಕರಣಶುದ್ಧವಾದ ಮಾಹೇಶ್ವರನ
ದಿವ್ಯಜ್ಞಾನಕ್ಕೆ ಬೇರೊಂದು ಅತಿಶಯವಿಲ್ಲ.
ಆತಗೊಂದು ಆಶ್ರಯಾಭಿಮಾನವಿಲ್ಲದೆ ವಿದಿನಿಷೇಧಾತೀತನಾಗಿ
ಸರ್ವಾಶ್ರಮಗಳಿಂದ ತಾನೆ ಪೂಜ್ಯನಾಗಿ ಜೀವನ್ಮುಕ್ತನೆಂದು
ಅವಧೂತನೆಂದು ಸ್ಥಿತಃ ಸಮಜ್ಞನೆಂದು ಗುಣಾತೀತನೆಂದು
ಶಿವಭಕ್ತನೆಂದು ಬ್ರಾಹ್ಮಣನೆಂದು
ಪೆಸರುವಡೆದಿಪ್ಪಾತನೆ ಅತ್ಯಶ್ರಮನಪ್ಪ ನೋಡಾ.
“ಲಿಂಗಂತಿವೇ ಭವೇಕ್ಷೇತ್ರಂ ಅಂಗಂ ಸಂಯೋಗಮಾಶ್ರಿತಃ
ತಸ್ಮಾರ್ಲಿಂಗಾಂಗ ಸಂಯೊಕ್ತೋ ಯೇಪಿಸ್ತೋತ್ಯಶ್ರಮಿ ಭವೇತ್”
ಇಂತೆಂದುದಾಗಿ, ಪರಶಿವತತ್ವವೆ ಕ್ಷೇತ್ರ
ನಿರಂಗವೆ ಆಶ್ರಯವಾಗಿಪ್ಪನಯ್ಯ
ಇನ್ನು ಕರ್ಮಿ ಮುಮುಕ್ಷು ಅಭ್ಯಾಸಿ
ಅನುಭವಿ ಆರೂಢನೆಂದು ಐದು ತೆರ.
ಅದೆಂತೆಂದಡೆ:
ಮೂಢತನದಿಂದ ತನ್ನ ಜಾತಿಮಾತ್ರದ ಕರ್ಮವಿಡಿದು
ಶತಜನ್ಮದಿಂದ ಮುಕ್ತನಪ್ಪತನೆ ಕರ್ಮಿಯೆನಿಸುವನು.
ಜಗವು ತಥ್ಯವೆಂದರಿದು ಬಾಹ್ಯಕರ್ಮನಿಷ್ಠನಾಗಿ
ಮೂರು ಜನ್ಮದಿಂದ ಮುಕ್ತನಪ್ಪವನೆ ಮುಮುಕ್ಷುಯೆನಿಸುವ.
ಸ್ವಪ್ನದಂತೆ ಪ್ರಪಂಚವೆಲ್ಲಾ ಮಿಥ್ಯವೆಂದು ಕಡೆಯಲಿ
ಧ್ಯಾನದಿ ಕರ್ಮಯುಕ್ತನಾಗಿ
ಜನ್ಮದ್ವಯದಿಂದ ಮುಕ್ತನಪ್ಪಾತನೆ ಅಭ್ಯಾಸಿಯೆನಿಸುವ.
“ಬ್ರಾಹ್ಮಣಂತು ಸದಾಚಾರಿ ಪುನರ್ಜನ್ಮಂತು ವೈಷ್ಣವ
ತಥಾಪು ಪುನೋರ್ಜನ್ಮೇನ ಜಾಯತೇ ಶೂಲಿಪೂಜಕಃ
“ಶಿವಪೂಜಾದಶಜನ್ಮಾನಾಂ ಜಾಯತೇ ವೀರಶೈವಾಣಾಂ
ವೀರಶೈವ ಪುನೋರ್ಜನ್ಮೇ ಜಾಯತೇ ಚರಲಿಂಗಿನಾಂ
ಚರಲಿಂಗಿ ಮಹಾಯೋಗಿ ಪುನೋರ್ಜನ್ಮಂ ನವಿದ್ಯತೇ”
ಇಂತೆಂದುದಾಗಿ,
ವ್ಯವಹಾರವ ಉಪೇಕ್ಷಿಸಿ ವಿವೇಕತತ್ಪರನಾಗಿ
ಏಕಜನ್ಮದಿಂದ ನಿಜಮುಕ್ತನಪ್ಪಾತನೆ ಅನುಭಾವಿ ನೋಡಾ.
ವಿಶ್ವವಿಕೃತಿದೋರದೆ
ಆತ್ಮಜ್ಞಾನದಿಂದ ಸದ್ಯೋನ್ಮುಕ್ತನಪ್ಪಾತನೆ ಆರೂಢನಪ್ಪನಯ್ಯ
ಅದೆಂತೆಂದಡೆ:
ಶಿವಜ್ಞಾನದೀಕ್ಷಾಸಂಪನ್ನನಾದ ಯೋಗಿಶ್ವರಗೆ
ಗಗನದಂತೆ ಗಮನಾಗಮನವಿಲ್ಲ
ನಾಡಿಮಾರ್ಗ ನಿಯಮವಿಲ್ಲದ ಕಾರಣ,
ಕಾಶಿಯಲ್ಲಾಗಲೀ ಹೀನಾಶ್ರಯದಲ್ಲಾಗಲೀ
ಅರಿವು ಮರವೆಗಳಿಂದಾಗಲೀ ಇನ್ನಾವ ತೆರದಿಂದ [ಆಗಲಿ]
ಪ್ರಾಣತ್ಯಾಗವಾದರೂ ಕೊರತೆಯಿಲ್ಲ ನೋಡಾ.
“ಆಕಾಶಲಿಂಗಮಿತ್ಯಹು ಪೃಥ್ವಿ ತಸ್ಯಾದಿ ಪೀಠಕಂ
ಆಲಯಂ ಸರ್ವಭೂತಾನಾಂ ಲಯನಾಂ ಲಿಂಗಮುಚ್ಯತೇ”
ಇಂತಪ್ಪ ಯೋಗೀಶ್ವರಂಗೆ ನಮೋ ನಮೋ ಎಂಬೆನು ಕಾಣಾ
ಶೂನ್ಯನಾಥಯ್ಯ.
Art
Manuscript
Music
Courtesy:
Transliteration
Śame dame titakṣe uparati śrad'dhe samādhi
embivu āru tera nōḍā.
Adentendoḍe:
Antaḥkaraṇa nigrahave śame,
bāhyakaraṇa nigrahave dame,
krōdhādigaḷa sairisuvude titikṣe,
sarvakarmaparityāgave uparati,
sujñānaguruvinalliya viśvāsave śrad'dhe,
gurūpadēśava cittadalli dr̥ḍhaviḍivude samādhi.
Intivu aṅgadalli aḷavaṭṭa māhēśvaragēnu
maitri karuṇa mudita upēkṣa emba nālku tera.
Adentendaḍe:
Satpuruṣaroḍataṇa snēhave
maitriyenisuvudu.
Duḥkhātmaralliya marukave
karuṇavenisuvudu.
Puṇyajīvagaḷalliya santōṣave
muditavenisuvudu.
Pāpigaḷalli rāgadvēṣavilladippude
upēkṣeyenisuvudu nōḍā.
Intivu aṅgavāda parama māhēśvaranu
brahmacāri gr̥hastha vānaprastha san'yāsiyemba caturāśramigaḷindavu
antaḥkaraṇaśud'dhavāda māhēśvarana
divyajñānakke bērondu atiśayavilla.
Ātagondu āśrayābhimānavillade vidiniṣēdhātītanāgi
sarvāśramagaḷinda tāne pūjyanāgi jīvanmuktanendu
avadhūtanendu sthitaḥ samajñanendu guṇātītanendu
śivabhaktanendu brāhmaṇanendu
pesaruvaḍedippātane atyaśramanappa nōḍā.
“Liṅgantivē bhavēkṣētraṁ aṅgaṁ sanyōgamāśritaḥ
tasmārliṅgāṅga sanyoktō yēpistōtyaśrami bhavēt”
intendudāgi, paraśivatatvave kṣētra
niraṅgave āśrayavāgippanayya
innu karmi mumukṣu abhyāsi
Anubhavi ārūḍhanendu aidu tera.
Adentendaḍe:
Mūḍhatanadinda tanna jātimātrada karmaviḍidu
śatajanmadinda muktanappatane karmiyenisuvanu.
Jagavu tathyavendaridu bāhyakarmaniṣṭhanāgi
mūru janmadinda muktanappavane mumukṣuyenisuva.
Svapnadante prapan̄cavellā mithyavendu kaḍeyali
dhyānadi karmayuktanāgi
janmadvayadinda muktanappātane abhyāsiyenisuva.
“Brāhmaṇantu sadācāri punarjanmantu vaiṣṇavaTathāpu punōrjanmēna jāyatē śūlipūjakaḥ
“śivapūjādaśajanmānāṁ jāyatē vīraśaivāṇāṁ
vīraśaiva punōrjanmē jāyatē caraliṅgināṁ
caraliṅgi mahāyōgi punōrjanmaṁ navidyatē”
intendudāgi,
vyavahārava upēkṣisi vivēkatatparanāgi
ēkajanmadinda nijamuktanappātane anubhāvi nōḍā.
Viśvavikr̥tidōrade
ātmajñānadinda sadyōnmuktanappātane ārūḍhanappanayya
adentendaḍe:
Śivajñānadīkṣāsampannanāda yōgiśvarage
gaganadante gamanāgamanavillaNāḍimārga niyamavillada kāraṇa,
kāśiyallāgalī hīnāśrayadallāgalī
arivu maravegaḷindāgalī innāva teradinda [āgali]
prāṇatyāgavādarū korateyilla nōḍā.
“Ākāśaliṅgamityahu pr̥thvi tasyādi pīṭhakaṁ
ālayaṁ sarvabhūtānāṁ layanāṁ liṅgamucyatē”
intappa yōgīśvaraṅge namō namō embenu kāṇā
śūn'yanāthayya.