Index   ವಚನ - 16    Search  
 
ಯಮ ನಿಯಮ ಆಸನ ಪ್ರಾಣಾಯಾಮ ಪ್ರತ್ಯಹಾರ ಧಾರಣ ಧ್ಯಾನ ಸಮಾಧಿ ಎಂಬೀ ಕ್ರಮವೆಂತೆಂದಡೆ: ಅಹಿಂಸೆ ಸತ್ಯ ಅಸ್ತೆಯ ಬ್ರಹ್ಮಚರ್ಯ ಅಪರಿಗ್ರಹ ಎಂಬ ಐದು ಯಮ, ತಪ ಸ್ವಾಧ್ಯಾಯ ಸಂತೋಷ ಶೌಚ ಈಶ್ವರಪೂಜೆ ಎಂಬ ಐದು ನಿಯಮ, ಆಧಾರ ಸ್ವಾಧಿಷ್ಠಾನ ಎಂಬೆರಡು ಚಕ್ರಂಗಳ ಮಧ್ಯವೆ ಶಿವಯೋಗಿಯ ಸ್ಥಾನವು. ಯೋನಿಯ ಸ್ಥಾನವನು ಎಡದ ಮಡಹಿನಲೊತ್ತಿ ಆ ಪಾದದ ಮೇಲೆ ಮೇಢ್ರಮಂ ನಿಲಿಸಿ, ಅದರ ಮೇಲೆ ಬಲದ ಪಾದಮನಿರಿಸಿ ಎಡಬಲಕ್ಕೆ ಹಿಂದುಮುಂದಕ್ಕೆ ಒಲೆಯದ ಹಾಂಗೆ ವಜ್ರದಂಡ ಋಜುತ್ವವ ಆವಾಗಲು ಮಾಡುವುದು. ಅದರಿಂದ ಸರ್ವೇಂದ್ರಿಯಂಗಳು ನಷ್ಟ ನೋಡಾ. ಎಂಬತ್ನಾಲ್ಕು ಆಸನದೊಳಗೆ ಎರಡಾಸನ ಮುಖ್ಯವೆಂಬುದೇ ಆಸನ. ಆಧಾರಾದಿ ಚಕ್ರಾಂತರಾಳ ವರ್ಣನಸ್ತವಾದ ಹಂಸಪ್ರಸಾದ ಮಂತ್ರಮನರಿದು ನಮಿಸುತ್ತಿಹರು. ಅದೆಂತೆಂದಡೆ: “ಆಧಾರೇ ಲಿಂಗನಾಭೌ ಹೃದಯ ಸರಸಿಜೇ ತಾಲು ಮೂತಿ ಲಲಾಟೆ ದ್ವಿಪತ್ರೇ ಷೋಡಸಾರೆ ದ್ವಿದಶದಳೇ ದ್ವಾದಸಾರ್ದೆ ಚತುಷ್ಠಿ ವಾಸಾಂತೆ ಬಾಲಮಧ್ಯಡಬಘಟಸಹಿತೆ ಕಂಠದಶ ಸ್ವರಾಣಾಂ ಹಂಸಂ ತತ್ವಾರ್ಥಯುತ ಸಕಲದಳಗತಂರೂಪವರ್ಣಂ ನಮಾಮಿ” ಎಂದುದಾಗಿ, ಹ ಹ್ರಾ ಹಂ ಹಂಸವೆಂದು ಪಂಚಪ್ರಸಾದ ಮಂತ್ರಮಂ ಸರ್ವರು ನೆನೆವುತ್ತಿಹರು. ಇಂತೀ ಪರಮಹಂಸ ಪ್ರಸಾದವೆಂಬ ಶಿವಮಂತ್ರವೆ ಜೀವಹಂಸರೂಪಾಗಿ ಆಧಾರದಿ ಚಕ್ರಪರ್ಯಂತರ ವ್ಯಾಪಿಸಿಕೊಂಡು ಹೃದಯ ಸ್ಥಾನದಲ್ಲಿದ್ದು ನಾಸಿಕರಂಧ್ರದ ಗತಿಯಾಗಿಪ್ಪುದು ನೋಡಾ. ದಿವರಾತ್ರಿಯಲ್ಲಿ ಹೊರವೋಡುವ ಇಪ್ಪತ್ತೊಂದು ಸಾವಿರದ ಆರುನೂರ ಗಂಧಸ್ವರವನು ಪ್ರಾಣಾಯಾಮರತನಾದ ಶಿವಯೋಗೀಶ್ವರನು ಅತಃಪ್ರವೇಶಗತಿಶಂಖಾ ಜಪವ ಮಾಡುತ್ತಿಹನು ಅದೆಂತೆಂದಡೆ: ಆತ್ಮಪ್ರಸಾದವೆಂಬುದೆ ಸರ್ವಾತ್ಮರಲ್ಲಿ ರೇಚಕ ಮಣಿಪೂರಕವೆಂಬ ಪ್ರಾಣಾಪಾನ ರೂಪ ರವಿಶಶಿಗಳೊಡಗೂಡಿ ಸಂಚರಿಸಿ ಹಂ ಸಂ ಸೋಹಮೆಂದು ಈ ತೆರೆನಾಗಿ ಜೀವಮಂತ್ರವೆಂದು ಹಂಸ ಮಂತ್ರವೆಂದು ಅಜಪೆ ಗಾಯತ್ರಿಯೆಂದು ಹೇಳಿತ್ತು ನೋಡಾ. ಅದನಾದೊಡೆ ಪ್ರಾಣಾಯಾಮತ್ರಯವ ಮೊದಲು ಮಾಡಿದ ಬಳಿಕ ಆ ಮಂತ್ರಕ್ಕೆ ಹಂಸ ಋಷಿ ಅವ್ಯಕ್ತ ಗಾಯತ್ರಿ ಛಂದಸ್ಸು ಪರಮಹಂಸನೆ ದೇವತೆ, ಹಂ ಬೀಜ, ಸ್ವಹಾ ಶಕ್ತಿ ಸೋಹಂ ಕೀಲಕ ಪರಮಹಂಸ ಪ್ರಸಾದಾರ್ಥವಾದ ಜಪವೆ ವಿನಿಯೋಗಗಳೆಂದು ಸ್ಮರಿಸಿದ ಮೇಲೆ ಹಂ ಸಂ ಸೂರ್ಯಾತ್ಮನೆ ಅಂಗುಷ್ಟಾಭ್ಯಾಂ ನಮಃ ವಿಷಯಾರ್ಥವಾದ ಇಂದ್ರಿಯಂಗಳು ವಿರೋಧವೆ ಪ್ರಾಣಾಯಾಮ, ವಿಷಯಂಗಳ ಬಿಡುವುದೆ ಪ್ರತ್ಯಾಹಾರ, ಸ್ವಾತ್ಮನಿಷ್ಠೆಯೆ ಧಾರಣ, ಪರತತ್ವವೆ ತಾನೆಂಬುದೇ ಧ್ಯಾನ, ಎಚ್ಚರಲ್ಲದ ಮರವೆಯಲ್ಲದ ಸಂವಿತ್ತಾಗಿಪ್ಪುದೆ ಸಮಾಧಿ. ಇಂತೀ ಎರಡು ತೆರದ ಅಷ್ಟಾಂಗಯೋಗವನರಿದ ಶರಣನು ದೇಹಾಕಾರವುಳ್ಳಾತನಾಗಿದ್ದು ಪರಮಾತ್ಮನಲ್ಲಿ ನೆಳಲು ಶರೀರದ ಹಾಂಗೆ ತೋರುವ ಶಿವಯೋಗಿಗೆ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ ರೋಗ ಜರೆ ಮರಣ ಕಾರ್ಪಣ್ಯ ಶೋಕ ಚಿಂತೆ ಕ್ಷುಧೆ ತೃಷೆ ತೃಷ್ಣೆ ಲಜ್ಜೆ ಸುಖ ದುಃಖ ವಿಷಾದ ಹರುಷ ಜಾಗ್ರ ಸ್ವಪ್ನ ಸುಷುಪ್ತಿ ಶಂಕೆ ಗರ್ವವೆಂಬಿವರ ಭೀತಿಯಿಲ್ಲ ನೋಡಾ; ತಾಪತ್ರಯಂಗಳು ಇಲ್ಲ, ಸಪ್ತಧಾತುಗಳು ಇಲ್ಲದ ಕಾರಣ ನಿರಾಲಂಬನಾದ ತನುವಿನಲ್ಲಿ ಮನಸ್ಸೇಂದ್ರಿಯಂಗಳು ಇಲ್ಲ, ಆಕಾರ ಸಮೇತನಾಗಿದ್ದು ನಿರಾಕಾರನಾದ ಯೋಗೀಶ್ವರನು ಶರೀರದ ಹಾಂಗೆ ಜನರ ದೃಷ್ಟಿಗೆ ತೋರುವನು ಕಾಣಾ ಶೂನ್ಯನಾಥಯ್ಯ.