ನೊಸಲಿನಲ್ಲಿ ಮೂರು ಕಣ್ಣುಳ್ಳ
ಪಶುಪತಿಯಾದಡೂ ಆಗಲಿ,
ಆದ್ಯರ ವಚನಂಗಳಲ್ಲಿ,
ಹೊನ್ನ ಹಿಡಿದವರು ಗುರು ದ್ರೋಹಿಗಳು,
ಹೆಣ್ಣ ಹಿಡಿದವರು ಲಿಂಗ ದ್ರೋಹಿಗಳು,
ಮಣ್ಣ ಹಿಡಿದವರು ಜಂಗಮ ದ್ರೋಹಿಗಳು,
ಹೀಗೆಂದು ಸಾರುತ್ತವೆ ವೇದ.
ಹಿಡಿದ ಆಚರಣೆ ಅನುಸರಣೆಯಾಗಿ,
ತ್ರಿವಿಧವ ಹಿಡಿದು,ನಾನೆ ಬ್ರಹ್ಮವೆಂದು
ಉಂಡು ಉಪವಾಸಿ, ಬಳಸಿ ಬ್ರಹ್ಮಚಾರಿಗಳು
ಎಂಬ ಭವಕರ್ಮಿಗಳಿಗೆ ನರಕವೆ ಪ್ರಾಪ್ತಿ ನೋಡಾ?
ಲಿಂಗವಂತನೆಂಬೆನೆ ಜಂಗಮವೆಂಬೆನೆ?
ಹಿಡಿದ ಆಚರಣೆ ಅನುಸರಣೆಯಾದ
ಬಳಿಕ ಜಂಗಮವೆನಲಿಲ್ಲ.
ಜಗದಲ್ಲಿ ನಡೆವ ಜಂಗುಳಿಗಳು
ಭವಭವದಲ್ಲಿ ಬಳಲುತಿಪ್ಪರು ಅಮುಗೇಶ್ವರಾ.