ವಚನ - 281     
 
ಆಯತವಾಯಿತ್ತು ಅನುಭಾವ, ಸ್ವಾಯತವಾಯಿತ್ತು ಶಿವಜ್ಞಾನ, ಸಮಾಧಾನವಾಯಿತ್ತು ಸದಾಚಾರ. ಇಂತೀ ತ್ರಿವಿಧವು ಏಕರ್ಥವಾಗಿ, ಅರುಹಿನ ಹೃದಯ ಕಂದೆರೆದು, ಅನಂತಲೋಕಾಲೋಕದ ಅಸಂಖ್ಯಾತ ಮಹಾಗಣಂಗಳೆಲ್ಲರು ಲಿಂಗಭಾವದಲ್ಲಿ ಭರಿತರಾಗಿ, ಗಗನಸಿದ್ಧಾಂತದಿಂದ ಉಪದೇಶಕ್ಕೆ ಬಂದು, ಭಕ್ತಿರಾಜ್ಯವನೆ ಹೊಕ್ಕು, ನಿಜಲಿಂಗಸುಕ್ಷೇತ್ರವನೆ ಕಂಡು, ಅಮೃತಸರೋವರದೊಳಗಣ ವಿವೇಕವೃಕ್ಷ ಪಲ್ಲವಿಸಲು, ವಿರಕ್ತಿಯೆಂಬ ಪುಷ್ಪ ವಿಕಸಿತವಾಗಲು, ಪರಮಾನಂದವೆಂಬ ಮಠದೊಳಗೆ, ಪರಿಣಾಮ ಪಶ್ಚಿಮಜ್ಯೋತಿಯ ಬೆಳಗಿನಲ್ಲಿ ಪರುಷದ ಸಿಂಹಾಸನವನಿಕ್ಕಿ ಪ್ರಾಣಲಿಂಗ ಮೂರ್ತಿಗೊಂಡಿರಲು, ದಕ್ಷಿಣವ ದಾಂಟಿ ಉತ್ತರಾಬ್ಧಿಯಲ್ಲಿ ನಿಂದು, ಅಖಂಡ ಪರಿಪೂರ್ಣಪೂಜೆಯ ಮಾಡುವವರಿಗೆ ನಮೋ ನಮೋ ಎಂಬೆ ಗುಹೇಶ್ವರಾ.