Index   ವಚನ - 40    Search  
 
ನಿಮಿತ್ತ ಲಗ್ನ ಮಾಯಾಮರುವಡಿ ಬೇಳುವೆಮೂಲಿಕೆಯಿಂದ ಕಡೆಯೆ ನಿನ್ನ ಇರವು? ನೀನೆ ಗತಿಯೆಂದು ಅರ್ಚಿಸುವವರಲ್ಲಿ, ನೀನೆ ಮತಿಯೆಂದು ನೆನೆವವರಲ್ಲಿ, ನೀನಲ್ಲದೆ ಪೆರತೊಂದನರಿಯದವರಲ್ಲಿ, ನೀನಿರದಿದ್ದಡೆ ನಿನಗದೆ ವಿಶ್ವಾಸಘಾತಕ, ನಿನಗದೆ ಪಾತಕ. ನಿನ್ನ ಗುಣವ ನಾನಿನ್ನರಿದು ಮುಟ್ಟಿದೆನಾದಡೆ, ಪಂಚಮಹಾಪಾತಕ. ಇದಕ್ಕೆ ದೃಷ್ಟ: 'ಯಥಾ ಬೀಜಃ ತಥಾಂಕುರ'ದಂತೆ. ಅದು ನಿನ್ನ ಗುಣ ಎನ್ನಲ್ಲಿ ಸುಳಿದ ಸುಳಿವು. ಅದು ಬೀಜದ ನಷ್ಟ: ಫಲಕ್ಕೆ ಮೊದಲಿಲ್ಲ. ಎನ್ನ ನಿನ್ನ ಮಾತಿನ ಬಳಕೆ ಬೇಡ; ಎನ್ನಲ್ಲಿ ಸನ್ನದ್ಧನಾಗಿರು ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕ ಮಲ್ಲಿಕಾರ್ಜುನಾ.