Index   ವಚನ - 7    Search  
 
ಅಂತರಂಗ ಬಹಿರಂಗ ಪರಮಾಕಾಶದ ಪರಬ್ರಹ್ಮಸ್ಥಾನ ಬ್ರಹ್ಮರಂಧ್ರದಲ್ಲಿ, ಪರಬ್ರಹ್ಮ ಪರಮಾತ್ಮನು, ನಿಷ್ಕಳ ನಿರವಯ ನಿರುಪಮ ಶ್ರೀಗುರುಮೂರ್ತಿ ಲಿಂಗಭರಿತವಾಗಿಪ್ಪನು, `ಶಿವಂ ಪರಮಾಕಾಶಮಧ್ಯೇ ಧ್ರುವಂ ತತ್ವಾಧಿಕಂ' ಎಂದುದಾಗಿ, ಇದು ಕಾರಣ, ನಾನಾ ವೇದ ಶಾಸ್ತ್ರ ಪುರಾಣ ಆಗಮಂಗಳ ಮತವು, ಇದು ಶ್ರುತವು, ಭ್ರೂಮಧ್ಯದಲ್ಲಿ ಅಂತರಾತ್ಮನು ಸಕಲ ನಿಷ್ಕಲ ಪರಂಜ್ಯೋತಿರ್ಲಿಂಗಮೂರ್ತಿಭರಿತವಾಗಿಪ್ಪನು. `ಪರಾತ್ಪರಂ ಪರಂಜ್ಯೋತಿಭ್ರೂಮಧ್ಯೇ ತು ವ್ಯವಸ್ಥಿತಂ' ಎಂದುದಾಗಿ ಹೃದಯಕಮಲಮಧ್ಯದಲ್ಲಿ ಜೀವಾತ್ಮನು. ಕೇವಲ ಸಕಲಜಂಗಮಮೂರ್ತಿ ಲಿಂಗಭರಿತವಾಗಿಪ್ಪನು, `ಹೃದಯಮಧ್ಯೇ ವಿಶ್ವೇದೇವಾ ಜಾತವೇದಾ ವರೇಣ್ಯಃ' ಎಂದುದಾಗಿ. ಇಂತು ಪರಬ್ರಹ್ಮ, ಬ್ರಹ್ಮರಂಧ್ರ ಭ್ರೂಮಧ್ಯ ಹೃದಯಸ್ಥಾನದಲ್ಲಿ ನಿಷ್ಕಲ, ಸಕಲನಿಷ್ಕಲ, ಸಕಲ ಪರಮಾತ್ಮ ಅಂತರಾತ್ಮ ಜೀವಾತ್ಮನೆಂದೆನಿ[ಸೆ] ಶ್ರುತ ದೃಷ್ಟ ಅನುಮಾನದಿಂ ಕಂಡು ವಿನೋದ ಕಾರಣ ಮಾಯಾವಶವಾಗಿ, ಪಂಚಭೂತಂಗಳನ್ನು ಸೃಜಿಸಿ, ಸಕಲಪ್ರಪಂಚವನೂ ಬೆರಸಿ, ಮಾಯಾಧೀನವಾಗಿ ವಿನೋದಿಸಿ ಆ ಮಾಯೆಯನೂ ಸಕಲಪ್ರಪಂಚವನೂ ತ್ಯಜಿಸಲಿಕೆ ಬಹಿರಂಗದಲಿ ಶ್ರೀಗುರುರೂಪಾಗಿ ಬೋಧಿಸಿ ಪರಮಾತ್ಮನು ಪರಬ್ರಹ್ಮವಾಗಿ ನಿಜಪದವನೈದಿ ಸುಖಿಯಾಗಿಪ್ಪನು. ಇಂತಹ ಅರಿವೇ ಪರಬ್ರಹ್ಮ, ಮರವೆಯೇ ಮಾಯಾಸಂಬಂಧವಯ್ಯಾ ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.