ಅಯ್ಯಾ, ನೀನು ತತ್ತ್ವಂಗಳ ಮರೆಗೊಂಡಿರ್ಪನ್ನಕ್ಕ,
ನಾನು ಕಾಯವ ಮರೆಗೊಂಡಿರ್ದೆನಯ್ಯಾ.
ಅಯ್ಯಾ, ನೀನು ಶಕ್ತಿಯ ಮರೆಗೊಂಡಿರ್ಪನ್ನಕ್ಕ,
ನಾನು ಆಸೆಯ ಮರೆಯಲ್ಲಿರ್ದೆನಯ್ಯಾ.
ನಿನ್ನ ಬೆಡಗು ಬಿನ್ನಾಣವ ನಾ ಬಲ್ಲೆ,
ನನ್ನ ಬೆಡಗು ಬಿನ್ನಾಣವ ನೀ ಬಲ್ಲೆ.
ಮರೆಗೆ ಮರೆಯನೊಡ್ಡಿ ಜಾರಿ ಹೋದೆಯಲ್ಲಾ.
ಈ ಬಿನ್ನಾಣದ ಮರೆಯನು ತೆರೆದು ದರ್ಶನಂ ಮಾಡಿ,
ನಿನ್ನೊಳಗೆ ಎನ್ನನಿರಿಸಿ, ಎನ್ನೊಳಗೆ ನಿನ್ನನಿರಿಸಿ,
ಪ್ರಾಣ ಪ್ರಾಣವ ಸಂಯೋಗವ ಮಾಡಿದೆನು
ಶ್ರೀಗುರು, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.