Index   ವಚನ - 33    Search  
 
ಅರುಹೆಂಬ ಗುರುವಿನ ಕೈಯಲ್ಲಿ, ವಿರತಿಯೆಂಬ ಶಿವದಾರಮಂ ಕೊಟ್ಟು, ಸುಮತಿಯೆಂಬ ಸಜ್ಜೆಯಂ ಪವಣಿಸಿ, ಸಮತೆಯೆಂಬ ಲಿಂಗಸಾಹಿತ್ಯವ ಬಿಜಯಂಗೈಸಿಕೊಂಡು, ಸರ್ವಜೀವದಯಾಪರನೆಂದು ಲಿಂಗಾರ್ಚನೆಯಂ ಮಾಡುವ ಭಕ್ತನ ಕರಾಧಾರದ ಲಿಂಗವು ತಪ್ಪಿ ಆಧಾರಸ್ಥಾಪ್ಯವಾದಡೇನು? ಶಂಕೆಗೊಳಲಿಲ್ಲ. ತೆಗೆದುಕೊಂಡು ಮಜ್ಜನಕ್ಕೆರೆವುದೇ ಸದಾಚಾರ. ಮುನ್ನ ಶ್ರೀಗುರು ಷಟ್‍ಸ್ಥಲವನು ಅಂತರಂಗದಲ್ಲಿ ನಿಕ್ಷೇಪಿಸಿದನಾಗಿ ದೃಶ್ಯಕ್ಕೆ ತ್ಯಾಗವಲ್ಲದೆ ಅದೃಶ್ಯಕ್ಕೆ ತ್ಯಾಗವುಂಟೆ? ಇಲ್ಲ. ಉಂಟೆಂದನಾದಡೆ ಗುರುದ್ರೋಹ. ಆ ಭಕ್ತನಿಂತವನಂತನೆಂದು ದೂಷಿಸಿ ನುಡಿದವರಿಗೆ ಅಘೋರನರಕ ತಪ್ಪದಯ್ಯಾ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.