Index   ವಚನ - 35    Search  
 
ಅರ್ಪಿತದ ಮಹಿಮೆಯ ಅನುವ, ಪ್ರಸಾದದ ಮಹಿಮೆಯ ಆವಂಗಾವಂಗರಿಯಬಾರದು. ವಿಷ್ಣ್ವಾದಿ ದೇವ ದಾನವ ಮಾನವ, ಋಷಿಜನಂಗಳಿಗೆಯೂ ಅರಿಯಬಾರದು. ಕಿಂಚಿತ್ತರಿದಡೆಯೂ ಅರ್ಪಿಸಬಾರದು. ಕಿಂಚಿತ್ ಅರ್ಪಿಸಿದಡೆಯೂ ಪ್ರಸಾದವ ಹಡೆಯಬಾರದು. ಕಿಂಚಿತ್ ಪ್ರಸಾದವ ಹಡೆದಡೆಯೂ, ಪ್ರಸಾದವ ಭೋಗಿಸಿ ಪರಿಣಾಮದಿಂ ಮುಕ್ತರಾಗಿರಲರಿಯರು. ಶಿವ ಶಿವಾ! ಗುರು ಲಿಂಗ ಜಂಗಮಕ್ಕೆ ತನು ಮನ ಧನವನರ್ಪಿಸಲರಿಯರು. ಗುರು ಲಿಂಗ ಜಂಗಮವನೇಕೀಭವಿಸಿ ಮಹಾಲಿಂಗವನು ನೇತ್ರದಲ್ಲಿ ಧರಿಸಿ, ನೇತ್ರಲಿಂಗಕ್ಕೆ ನೇತ್ರದ ಕೈಯಲೂ ರೂಪವನರ್ಪಿಸಲರಿಯರು. ಆ ಮಹಾಲಿಂಗವನು ಶ್ರೋತ್ರದಲ್ಲಿ ಧರಿಸಿ ಶ್ರೋತ್ರಲಿಂಗಕ್ಕೆ ಶ್ರೋತ್ರದ ಕೈಯಲೂ ಮಹಾಶಬ್ದವನರ್ಪಿಸಲರಿಯರು. ಆ ಮಹಾಲಿಂಗವನು ಘ್ರಾಣದಲ್ಲಿ ಧರಿಸಿ ಘ್ರಾಣಲಿಂಗಕ್ಕೆ ಘ್ರಾಣದ ಕೈಯಲೂ ಸುಗಂಧವನರ್ಪಿಸಲರಿಯರು. ಆ ಮಹಾಲಿಂಗವನು ಜಿಹ್ವೆಯಲ್ಲಿ ಧರಿಸಿ ಜಿಹ್ವೆಯಲಿಂಗಕ್ಕೆ ಜಿಹ್ವೆಯ ಕೈಯಲೂ ಮಹಾರಸವನರ್ಪಿಸಲರಿಯರು. [ಆ ಮಹಾಲಿಂಗವನು ತ್ವಕ್ಕಿನಲ್ಲಿ ಧರಿಸಿ ತ್ವಕ್‍ಲಿಂಗಕ್ಕೆ ಘ್ರಾಣದ ಕೈಯಲ್ಲಿ ಮಹಾಸ್ಪರ್ಶವನರ್ಪಿಸಲರಿಯರು] ಆ ಮಹಾಲಿಂಗವನು ಭಾವದಲ್ಲಿ ಧರಿಸಿ ಭಾವಲಿಂಗಕ್ಕೆ ಭಾವದ ಕೈಯಲೂ ಸರ್ವಸುಖಪರಿಣಾಮ ಮೊದಲಾದ ಭಾವಾಭಾವ ನಿಷ್ಕಲವಸ್ತುವನರ್ಪಿಸಲರಿಯರು. ಆ ಮಹಾಲಿಂಗವನು ಮನದಲ್ಲಿ ಧರಿಸಿ ಮನೋಮಯಲಿಂಗಕ್ಕೆ ಮನದ ಕೈಯಲೂ ಸಕಲ ನಿಷ್ಕಲಾದಿ ರೂಪವನರ್ಪಿಸಲರಿಯರು. ಆ ಮಹಾಲಿಂಗವನು ವಾಕ್ಕಿನಲ್ಲಿ ಧರಿಸಿ ವಾಕ್‍ಲಿಂಗಕ್ಕೆ ವಾಕ್ಕಿನ ಕೈಯಲ್ಲೂ ಪಡಿಪದಾರ್ಥ ಮೊದಲಾದ ಸಕಲದ್ರವ್ಯಂಗಳ ರುಚಿ ಮೊದಲಾದ ಸುಖವನರ್ಪಿಸಲರಿಯರು. ಆ ಮಹಾಲಿಂಗವನು ಇಂತು ಮನೋವಾಕ್ಕಾಯವೆಂಬ ತ್ರಿವಿಧದಲ್ಲಿ ಏಕಾದಶ ಅರ್ಪಿತ ಸ್ಥಾನವನರಿದು ಅರ್ಪಿತವಾದ ಏಕಾದಶ ಪ್ರಸಾದವನರಿಯರು. ಮಹಾರ್ಪಿತವನು ಮಹಾಪ್ರಸಾದವನು ಎಂತೂ ಅರಿಯರು. ಪರಂಜ್ಯೋತಿಃ ಪರಂ ತತ್ತ್ವಂ ಪರಾತ್ಪರತರಂ ತಥಾ ಪರವಸ್ತು ಪ್ರಸಾದಃ ಸ್ಯಾದಪ್ರಮಾಣಂ ಪ್ರಸಾದಕ ಎಂಬುದನರಿಯರು. ಪೂಜಕಾ ಬಹವಸ್ಸಂತಿ ಭಕ್ತಾಶ್ಶತಸಹಸ್ರಶಃ ಮಹಾಪ್ರಸಾದಪಾತ್ರಂ ತು ದ್ವಿತ್ರಾ ವಾ ನೈವ ಪಂಚಷಃ ಪ್ರಸಾದಂ ಗಿರಿಜಾದೇವಿ ಸಿದ್ಧಕಿನ್ನರಗುಹ್ಯಕಾಃ ವಿಷ್ಣುಪ್ರಮುಖದೇವಾಶ್ಚ ನ ಜಾನಂತಿ ಶಿವಂಕರಂ ಎಂಬ ಪ್ರಸಾದ ಎಲ್ಲರಿಗೆಯೂ ಅಸಾಧ್ಯ. ಅರ್ಪಿತ ಮುನ್ನವೇ ಅಸಾಧ್ಯ. ಅರ್ಪಿತವೂ ಪ್ರಸಾದವೂ ಚನ್ನಬಸವಣ್ಣಂಗಾಯಿತ್ತು ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.